ADVERTISEMENT

ವೊಡಾಫೋನ್ ; ಪುನರ್ ಪರಿಶೀಲನಾ ಅರ್ಜಿ ಅಸಂಭವ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ನವದೆಹಲಿ (ಪಿಟಿಐ): ವೊಡಾಫೋನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಆದಾಯ ತೆರಿಗೆ ಇಲಾಖೆಯು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆ ಕಡಿಮೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಹತ್ತು ಸದಸ್ಯರನ್ನು ಒಳಗೊಂಡ ಪ್ರಮುಖರ ಸಮಿತಿಯು ಸುಪ್ರೀಂ ಕೋರ್ಟ್ ಆದೇಶವನ್ನು ಪರಿಶೀಲಿಸಲಿದೆ. ಆದರೆ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಶುಕ್ರವಾರ ನೀಡಿದ ಆದೇಶವನ್ನು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.

`ನಾವು ತೀರ್ಪನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಿದೆ. ನಂತರವಷ್ಟೇ ಮುಂದಿನ ಕ್ರಮಗಳನ್ನು ನಿರ್ಧರಿಸಬೇಕಿದೆ~ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಎಂ.ಸಿ.ಜೋಶಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂಕೋರ್ಟ್, 2007ರಲ್ಲಿ ಹಚಿನ್ಸನ್-ಎಸ್ಸಾರ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡ ವಹಿವಾಟಿಗೆ ಸಂಬಂಧಿಸಿದಂತೆ 11,000 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುವಂತೆ ವೊಡಾಫೋನ್‌ಗೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಬದಿಗಿರಿಸಿತ್ತು.

ಅಲ್ಲದೆ ವೋಡಾಫೋನ್ ಸಂಸ್ಥೆಯು ಠೇವಣಿ ಇಟ್ಟಿದ್ದ 2,500 ಕೋಟಿ ರೂಪಾಯಿ ಮೊತ್ತವನ್ನು ಶೇ 4ರ ಬಡ್ಡಿಯೊಂದಿಗೆ ಇನ್ನೆರಡು ತಿಂಗಳಲ್ಲಿ ವಾಪಸ್ ಮಾಡುವಂತೆ ಅದು ಆದಾಯ ತೆರಿಗೆ ಇಲಾಖೆಗೆ ಸೂಚಿಸಿತ್ತು.ಈ ಪ್ರಕರಣದಲ್ಲಿ  ತ್ರಿಸದಸ್ಯ ಪೀಠವು ಈಗಾಗಲೇ ವಿಸ್ತ್ತೃತವಾಗಿ ವಿಚಾರಣೆ ಮಾಡಿದ್ದರಿಂದ ಸರ್ಕಾರವು ಕೋರ್ಟ್ ಆದೇಶದ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಸಂಭವ ಕಡಿಮೆ ಎಂದು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ. `ತೀರ್ಪಿನಲ್ಲಿ ಯಾವುದೇ ದೋಷವಿಲ್ಲ. ಆದ ಕಾರಣ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಪ್ರಶ್ನೆಯೇ ಇಲ್ಲ~ ಎಂದು ಕೆಪಿಎಂಜಿ ಸಂಸ್ಥೆಯ ತೆರಿಗೆ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ದಿನೇಶ್ ಕನಬರ್ ತಿಳಿಸಿದ್ದಾರೆ.

`ತಾಂತ್ರಿಕವಾಗಿ ಸರ್ಕಾರವು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆದರೆ ಈಗಾಗಲೇ ಈ ಪ್ರಕರಣದಲ್ಲಿ ಸಮಗ್ರ ಹಾಗೂ ವಿಸ್ತೃತ ವಿಚಾರಣೆ ನಡೆದಿದೆ. ಹಾಗಾಗಿ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ ಎನ್ನುವುದು ನನ್ನ ಭಾವನೆ~ ಎಂದು ಖಾಸಗಿ ಲೆಕ್ಕಪರಿಶೋಧನಾ ಸಂಸ್ಥೆಯಾದ ಪ್ರೈಸ್ ವಾಟರ್‌ಹೌಸ್‌ಕೂಪರ್ಸ್‌ನ ಕಾರ್ಯಕಾರಿ ನಿರ್ದೇಶಕ ರಾಹುಲ್ ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಈಗ ಸರ್ಕಾರದ ಮುಂದಿರುವ ಏಕೈಕ ಆಯ್ಕೆ ಎಂದರೆ ಉದ್ದೇಶಿತ ಕಾಯ್ದೆಗೆ ತಿದ್ದುಪಡಿ ತರುವುದು. ಆದರೆ ಇಂಥ ತಿದ್ದುಪಡಿಗಳು ಸ್ವತಂತ್ರ ಸ್ವರೂಪದ್ದಾಗಿರುತ್ತವೆ. ಆದ ಕಾರಣ ಅವು ಪೂರ್ವಾನ್ವಯವುಳ್ಳ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಟ್ಯಾಕ್ಸ್ ಪ್ರಾಕ್ಟೀಸಸ್ ಸಂಸ್ಥೆಯ ಅಸೀಂ ಚಾವ್ಲಾ  ಹೇಳುತ್ತಾರೆ.

ಕಾನೂನು ತಿದ್ದುಪಡಿ ಭಯ
ವೊಡಾಫೋನ್ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿರುವ ಸರ್ಕಾರ, ತೆರಿಗೆಗೆ ಸಂಬಂಧಿಸಿದ ಕಾನೂನುಗಳಲ್ಲಿ ತಿದ್ದುಪಡಿ ತರಬಹುದು; ಆ ಮೂಲಕ ದೀರ್ಘಾವಧಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸಮಸ್ಯೆ ಆಗಬಹುದು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಎಚ್ಚರಿಕೆ ನೀಡಿದೆ.

`ಸುಪ್ರೀಂಕೋರ್ಟ್ ತೀರ್ಪು ಕಾನೂನು ತಿದ್ದುಪಡಿಗೆ ಹಾದಿಯಾಗದಿರಲಿ ಎಂದು ನಾನು ಆಶಿಸುತ್ತೇನೆ~ ಎಂದು ಫಿಕ್ಕಿ ಅಧ್ಯಕ್ಷ ರಾಜ್ಯವರ್ಧನ ಕನೊರಿಯಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

`ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಆದಾಯದ ಹರಿವಿಗೆ ತಡೆ ಉಂಟಾಗಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಸರ್ಕಾರ ಕಾನೂನು ತಿದ್ದುಪಡಿಯಂಥ ನಿರ್ಧಾರಕ್ಕೆ ಬರುವ ಸಾಧ್ಯತೆ ಕೂಡ ಇದೆ~ ಎಂದು ಅವರು ವಿಶ್ಲೇಷಿಸುತ್ತಾರೆ.

`ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಧನಾತ್ಮಕ ಅಂಶಗಳಿವೆ. ವೊಡಾಫೋನ್ ಪ್ರಕರಣವು ಒಂದು ಮನೋಧರ್ಮವನ್ನು ಬದಲಾಯಿಸಿದೆ~ ಎಂದೂ ಅವರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT