ADVERTISEMENT

ಶಂಕರ ಬಿದರಿ: ಕಳಂಕ ನಿವಾರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 19:59 IST
Last Updated 10 ಜನವರಿ 2013, 19:59 IST
ಶಂಕರ ಬಿದರಿ: ಕಳಂಕ ನಿವಾರಣೆ
ಶಂಕರ ಬಿದರಿ: ಕಳಂಕ ನಿವಾರಣೆ   

ನವದೆಹಲಿ: ಶಂಕರ ಮಹಾದೇವ ಬಿದರಿ ಅವರನ್ನು ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಿಸಿದ ಆದೇಶವನ್ನು ರದ್ದುಪಡಿಸಿದ ಸಂದರ್ಭದಲ್ಲಿ ಹೈಕೋರ್ಟ್ ಅವರ ವಿರುದ್ಧ ಆಡಿರುವ `ಕಟು ನುಡಿ ಅನಗತ್ಯ' ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಗುರುವಾರ ವಿವಾದಕ್ಕೆ ತೆರೆ ಎಳೆಯಿತು. ಇದರಿಂದಾಗಿ ಬಿದರಿ ಅವರಿಗೆ ಅಂಟಿದ ಕಳಂಕ ನಿವಾರಣೆ ಆದಂತಾಗಿದೆ.

ಬಿದರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಫ್ತಾಬ್ ಆಲಂ ಹಾಗೂ ರಂಜನ್ ಪ್ರಕಾಶ್ ದೇಸಾಯಿ ಅವರನ್ನು ಒಳಗೊಂಡ ನ್ಯಾಯಪೀಠ, ಹೈಕೋರ್ಟ್ ಇಂಥ `ಬಿರು ನುಡಿಗಳನ್ನು ಆಡುವ ಅಗತ್ಯವಿರಲಿಲ್ಲ' ಎಂದು ಹೇಳಿತು. ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಬಳಿಕ ಭಾವೋದ್ವೇಗಕ್ಕೊಳಗಾದ ಬಿದರಿ ನ್ಯಾಯಾಲಯದ ಆವರಣದಲ್ಲಿ ಗಳಗಳನೆ ಅತ್ತರು.

ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ರಚಿಸಲಾಗಿದ್ದ ವಿಶೇಷ ಕಾರ್ಯಾಪಡೆ ಜಂಟಿ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಿದರಿ ಅವರನ್ನು ಡಿಜಿಪಿ ಹುದ್ದೆಗೆ ನೇಮಕ ಮಾಡಿದ ಆದೇಶವನ್ನು ರದ್ದುಪಡಿಸಿತು. ಶಂಕರ ಬಿದರಿ 1993- 96ರ ನಡುವೆ ವಿಶೇಷ ಕಾರ್ಯಾಪಡೆ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಗಿರಿಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಬಿದರಿ ನೇಮಕ ರದ್ದುಪಡಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಏಪ್ರಿಲ್ 24ರಂದು ತಡೆಯಾಜ್ಞೆ ನೀಡಿತು.

ಬಿದರಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ನ್ಯಾ. ಸದಾಶಿವ ಆಯೋಗ ಯಾವುದೇ `ದೋಷಾರೋಪ' ಮಾಡಿಲ್ಲ ಎಂದು ಪೀಠ ಹೇಳಿತು. ಬಿದರಿ ಸೇವೆಯಿಂದ ನಿವೃತ್ತರಾಗಿದ್ದರೂ `ಆತ್ಮ ಗೌರವ' ರಕ್ಷಣೆಗಾಗಿ ಕಾನೂನು ಹೋರಾಟ ನಡೆಸಿದ್ದರು. ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಬಿದರಿ ಪರ ವಾದಿಸಿದ್ದರು.  ಬಿದರಿ ಸಂತಸ ಸುಪ್ರೀಂ ತೀರ್ಪಿನಿಂದ ತಮ್ಮ ವ್ಯಕ್ತಿತ್ವಕ್ಕೆ ಅಂಟಿದ ಕಳಂಕ ದೂರವಾಗಿದೆ. ನ್ಯಾಯಾಂಗದ ಮೇಲೆ ನಂಬಿಕೆ ಬಂದಿದೆ. ಇದು ನನ್ನೊಬ್ಬನಿಗೆ ಸಂದ ಜಯ ಅಲ್ಲ. ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ಪೊಲೀಸರಿಗೆ ಸಿಕ್ಕ ಗೆಲುವು ಎಂದು ಬಿದರಿ ಬಣ್ಣಿಸಿದರು.

ವೀರಪ್ಪನ್ ಕಾರ್ಯಾಚರಣೆ ಬಳಿಕ ಬಂದ 165 ಲಕ್ಷದಲ್ಲಿ ಬಹುತೇಕ ಹಣವನ್ನು ದಾನ ಮಾಡಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.