ADVERTISEMENT

ಶಬ್ದಮಾಲಿನ್ಯ ವಿವರಿಸುವ ಅಂಶಗಳ ಜತೆ ಮಸೀದಿ ಚಿತ್ರ

ವಿವಾದಕ್ಕೀಡಾದ ಐಸಿಎಸ್‌ಇ 6ನೇ ತರಗತಿ ಪಠ್ಯ---–ಕ್ಷಮೆಯಾಚಿಸಿದ ಪ್ರಕಾಶಕರು

ಪಿಟಿಐ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಶಬ್ದಮಾಲಿನ್ಯ ವಿವರಿಸುವ ಅಂಶಗಳ ಜತೆ  ಮಸೀದಿ ಚಿತ್ರ
ಶಬ್ದಮಾಲಿನ್ಯ ವಿವರಿಸುವ ಅಂಶಗಳ ಜತೆ ಮಸೀದಿ ಚಿತ್ರ   

ನವದೆಹಲಿ:  ಐಸಿಎಸ್‌ಇ ಪಠ್ಯದ ಆರನೇ ತರಗತಿ ಪುಸ್ತಕದಲ್ಲಿ ಮಸೀದಿ ಎಂದರೆ ಶಬ್ದ ಮಾಲಿನ್ಯದ ಮೂಲ ಎಂಬ ಅರ್ಥ ಬರುವಂತೆ ಚಿತ್ರದಲ್ಲಿ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಸಿದೆ.

ಇದಕ್ಕಾಗಿ ಪುಸ್ತಕ ಪ್ರಕಾಶಕರು ಕ್ಷಮೆ ಕೂಡ ಕೋರಿ, ಇದನ್ನು ಮುಂದಿನ ಮುದ್ರಣದಿಂದ ತೆಗೆದುಹಾಕುವುದಾಗಿ ಆನ್‌ಲೈನ್‌ನಲ್ಲಿಯೇ ಹೇಳಿಕೆ ನೀಡಿದ್ದಾರೆ.
‘ಸೆಲಿನಾ ಪಬ್ಲಿಷರ್ಸ್‌’ ಪ್ರಕಟಿಸಿರುವ ವಿಜ್ಞಾನ ಪುಸ್ತಕದಲ್ಲಿ ‘ಶಬ್ದ ಮಾಲಿನ್ಯ’ದ ಕುರಿತಾಗಿ ಇರುವ ವಿಷಯದಲ್ಲಿ ಈ ಚಿತ್ರ ಪ್ರಕಟವಾಗಿದೆ.

ಹೆಚ್ಚಿನ ಶಬ್ದ ಮಾಡುವ ರೈಲು, ಕಾರು, ವಿಮಾನಗಳ ಚಿತ್ರಗಳ ಜೊತೆ ಮಸೀದಿಯೂ ಇದ್ದು ಪಕ್ಕದಲ್ಲೇ ವ್ಯಕ್ತಿಯೊಬ್ಬ ಕಿವಿ ಮುಚ್ಚಿಕೊಂಡಿರುವ ಚಿತ್ರವಿದೆ. ಈ ಚಿತ್ರ ತೆಗೆದುಹಾಕುವಂತೆ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಕೂಡ ನಡೆಯುತ್ತಿದೆ.

ADVERTISEMENT

‘ಯಾರದ್ದೇ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ನಮ್ಮ ಉದ್ದೇಶ ಆಗಿರಲಿಲ್ಲ. ಇದರಿಂದ ಯಾರಿಗಾದರೂ ನೋವು ಉಂಟಾಗಿದ್ದರೆ ಅದಕ್ಕಾಗಿ ಕ್ಷಮೆ ಕೋರುತ್ತೇವೆ’ ಎಂದು ಪ್ರಕಾಶಕ ಹೇಮಂತ್‌ ಗುಪ್ತ ಕ್ಷಮೆ ಕೋರಿದ್ದಾರೆ.

ಇನ್ನೊಂದೆಡೆ, ಇದು ತಮ್ಮ  ತಪ್ಪಲ್ಲ ಎಂದು ಐಸಿಎಸ್‌ಇ ಪ್ರತಿಕ್ರಿಯಿಸಿದೆ. ‘ಇದು ಐಸಿಎಸ್‌ಇ ಸೂಚಿಸಿರುವ ಪಠ್ಯವಲ್ಲ. ನಾವು ಇಂಥ ಪುಸ್ತಕವನ್ನು  ಪ್ರಕಟಿಸಲು ಸೂಚಿಸುವುದೂ ಇಲ್ಲ. ಇದು ಏನಿದ್ದರೂ ಪ್ರಕಾಶಕರ ಹಾಗೂ ಅಂಥ ಪುಸ್ತಕದಿಂದ ಬೋಧಿಸುವ ಶಾಲೆಗಳ ತಪ್ಪಾಗುತ್ತದೆ’ ಎಂದು ಐಸಿಎಸ್‌ಇಯ ಕಾರ್ಯನಿರ್ವಹಣಾಧಿಕಾರಿ ಗೆರ್ರಿ ಅರಥೂನ್‌ ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.