ADVERTISEMENT

ಶವಗಳನ್ನು ಸಮಾಧಿಯಿಂದ ಹೊರತೆಗೆದ ಪ್ರಕರಣ: ತೀಸ್ತಾಗೆ ಮತ್ತೆ ಸಂಕಷ್ಟ

ಪಿಟಿಐ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಶವಗಳನ್ನು ಸಮಾಧಿಯಿಂದ ಹೊರತೆಗೆದ ಪ್ರಕರಣ: ತೀಸ್ತಾಗೆ ಮತ್ತೆ ಸಂಕಷ್ಟ
ಶವಗಳನ್ನು ಸಮಾಧಿಯಿಂದ ಹೊರತೆಗೆದ ಪ್ರಕರಣ: ತೀಸ್ತಾಗೆ ಮತ್ತೆ ಸಂಕಷ್ಟ   

ನವದೆಹಲಿ: ಗುಜರಾತ್‌ ಗಲಭೆಯಲ್ಲಿ ಸಾವಿಗೀಡಾಗಿದ್ದವರ ಶವಗಳನ್ನು ಸಮಾಧಿಯಿಂದ ಹೊರತೆಗೆದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಶವ ಹೊರತೆಗೆದ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಕೈಬಿಡಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶಕ್ಕೆ  ತಡೆ ಕೋರಿ ತೀಸ್ತಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣಾ ಹಂತದ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಮಧ್ಯ ಪ್ರವೇಶದ ಅಗತ್ಯ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ  ಅಭಿಪ್ರಾಯಪಟ್ಟಿದೆ.

ADVERTISEMENT

ದೋಷಾರೋಪ ಪಟ್ಟಿ ಕೈಬಿಡುವುದು ಸೇರಿದಂತೆ ಯಾವುದೇ  ಕೋರಿಕೆ ಇದ್ದರೂ ಸ್ಥಳೀಯ ನ್ಯಾಯಾಲಯದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಉಚಿತ ಎಂದು ನ್ಯಾಯಮೂರ್ತಿಗಳು ತೀಸ್ತಾ ಅವರಿಗೆ ಸಲಹೆ ಮಾಡಿದರು.

ತೀಸ್ತಾ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿದರು.

ಏನಿದು ಪ್ರಕರಣ? ನದಿ ಬಳಿಯ ಸ್ಮಶಾನದಲ್ಲಿ ಹೂಳಲಾಗಿದ್ದ ಶವಗಳನ್ನು ಹೊರತೆಗೆದ ಪ್ರಕರಣದಲ್ಲಿ  ಪಂಚಮಹಲ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ತೀಸ್ತಾ ವಿರುದ್ಧ  ಎಫ್ಐಆರ್ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು 2011ರ ಏಪ್ರಿಲ್‌ 3ರಂದು ತೀಸ್ತಾ  ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಎಫ್‌ಐಆರ್‌ ಕೈಬಿಡುವಂತೆ ಕೋರಿ ತೀಸ್ತಾ  ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ಮೇ 27ರಂದು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.