ADVERTISEMENT

ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನ

ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಭಾಗಲ್‌ಪುರ(ಪಿಟಿಐ): ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಶಂಕಿತ ವ್ಯಕ್ತಿಯೊಬ್ಬನನ್ನು ಅಕ್ರಮ ಶಸ್ತ್ರಾಸ್ತ್ರಗಳ ಜೊತೆಗೆ ಬಿಹಾರದ ಭಾಗಲ್‌ಪುರ ಜಿಲ್ಲೆಯ ಹಾರಿಯೊ ಗ್ರಾಮದಲ್ಲಿ ಸೋಮವಾರ ಬಂಧಿಸಲಾಗಿದೆ.

‘ಶಂಕಿತ ಶಸ್ತ್ರಾಸ್ತ್ರ ಪೂರೈಕೆಗಾರ ಅಂಜಾನಿ ರಾಯ್್ ಬಗ್ಗೆ ಖಚಿತ ಮಾಹಿತಿಯ ಪಡೆದ ಪೊಲೀಸರು ದಾಳಿ ನಡೆಸಿ, ಆತನಿಂದ ಐದು ನಾಡ ಪಿಸ್ತೂಲ್‌, ಎರಡು ತುಪಾಕಿ, ಒಂದು ಗಾಳಿಕೋವಿ ಮತ್ತು 65 ಮದ್ದುಗುಂಡು­ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮುಂಗರ್‌ ಜಿಲ್ಲೆಯಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ತನ್ನ ಗಿರಾಕಿಗಳಿಗೆ ಪೂರೈಕೆ ಮಾಡಲು ರಾಯ್‌ ಜಿಲ್ಲೆಗೆ ಬಂದಾಗ ಆತನನ್ನು ಬಂಧಿಸಲಾಗಿದೆ. ಅಲ್ಲದೇ, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುರೇನಿಯಂ : ಬದಲಾವಣೆ ಇಲ್ಲ
ನವದೆಹಲಿ (ಪಿಟಿಐ):
ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರದ ಜತೆ ಮಾಡಿಕೊಂಡ ಒಪ್ಪಂದದಂತೆ ನಡೆದುಕೊಳ್ಳಲಾಗುತ್ತಿದ್ದು, ಈಗಿನ ತಮ್ಮ ಸರ್ಕಾರ ಒಪ್ಪಂದವನ್ನು ಮುರಿಯುವುದಿಲ್ಲ ಎಂದು ಆಸ್ಟ್ರೇಲಿಯಾ ಭರವಸೆ ನೀಡಿದೆ.

ನಾಗರಿಕ ಉದ್ದೇಶಕ್ಕೆ ಯುರೇನಿಯಂ ಪೂರೈಕೆ ಮಾಡುವ ಒಪ್ಪಂದಕ್ಕೆ ಸಂಬಂಧಿಸಿ ಉಭಯ ದೇಶಗಳ ನಡುವಣ ಮುಂದಿನ ಸುತ್ತಿನ ಮಾತುಕತೆ ಈ ವರ್ಷಾಂತ್ಯಕ್ಕೆ  ನಡೆಯುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಹೈಕಮೀಷನರ್‌ ಪ್ಯಾಟ್ರಿಕ್‌ ಸಕ್ಲಿಂಗ್‌ ತಿಳಿಸಿದರು.

‘ನಾಗರಿಕ ಉದ್ದೇಶದ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಯಲ್ಲಿ ನಾವಿಬ್ಬರೂ ಪ್ರಗತಿ ಸಾಧಿಸಿದ್ದೇವೆ. ಆದರೆ ಈ ವಿಷಯದಲ್ಲಿ ಯಾವುದೇ ಕಾಲಮಿತಿ ಗೊತ್ತುಮಾಡಿಲ್ಲ’ ಎಂದು ಪ್ಯಾಟ್ರಿಕ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮತ್ತೆ ಕದನ ವಿರಾಮ ಉಲ್ಲಂಘನೆ
ಜಮ್ಮು (ಪಿಟಿಐ):
ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು  ಭಾನುವಾರ ತಡ ರಾತ್ರಿ ಭಾರತದ ಆರು ಕಾವಲು ಚೌಕಿಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ, ಮತ್ತೆ ಕದನ ವಿರಾಮ ಉಲ್ಲಂಘಿಸಿವೆ.

‘ಫೂಂಚ್ ಜಿಲ್ಲೆಯ ಮಂಡಿ ಮತ್ತು ಗ್ರಾಹಿ ಉಪ ವಿಭಾಗಗಳ ಗಡಿ ನಿಯಂತ್ರಣ ರೇಖೆಯಲ್ಲಿ ಸಣ್ಣ, ಸ್ವಯಂಚಾಲಿತ ಶಸ್ತ್ರಾಸ್ತ್ರ ಹಾಗೂ ಶೆಲ್‌ಗಳನ್ನು ಬಳಸಿ ಪಾಕ್ ಪಡೆಗಳು ದಾಳಿ ನಡೆಸಿದ್ದು, ಇದಕ್ಕೆ ಭಾರತ ಕೂಡ ಪ್ರತ್ಯುತ್ತರ ನೀಡಿದೆ‘ ಎಂದು ರಕ್ಷಣಾ ವಕ್ತಾರ ಎಸ್.ಎನ್. ಆಚಾರ್ಯ ತಿಳಿಸಿದ್ದಾರೆ.

‘ಉಭಯಪಡೆಗಳ ಮಧ್ಯೆ ರಾತ್ರಿ 11.30ರ ಸುಮಾರಿಗೆ ಆರಂಭವಾದ ಗುಂಡಿನ ಕಾಳಗ, ಬೆಳಿಗ್ಗೆ 3.45ರವರೆಗೂ ನಡೆಯಿತು. ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣ ಹಾನಿಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಅಸಾರಾಮ್ ಬಂಧನ ಅವಧಿ ವಿಸ್ತರಣೆ
ಜೈಪುರ (ಐಎಎನ್ಎಸ್):
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನದಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು (72) ಅವರ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ಮತ್ತೆ 14 ದಿನಗಳಿಗೆ ವಿಸ್ತರಿಸಿದೆ.

ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳಿಸಿ, ಸೋಮವಾರ ಜೋಧಪುರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ಅಸಾರಾಮ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ  ಜಿಲ್ಲಾ ಹಾಗೂ ಸೆಷೆನ್ಸ್ ಜಡ್ಜ್ ಆದೇಶ ಹೊರಡಿಸಿದರು.

ಸೆ. 2ರಂದು ಇದೇ ಕೋರ್ಟ್‌ ಮುಂದೆ ಹಾಜರಾಗಿದ್ದ ಅಸಾರಾಮ್ ಅವರನ್ನು ಸೆ. 16ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಜೋಧಪುರ­ದಲ್ಲಿರುವ ತನ್ನ ಆಶ್ರಮದಲ್ಲಿ 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಸಾರಾಮ್ ಅವರನ್ನು ಸೆ. 1ರಂದು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.