ADVERTISEMENT

ಶಾಖೋತ್ಪನ್ನ ವಿದ್ಯುತ್ ಘಟಕ ನಿರ್ಮಾಣ: ಮೀನುಗಾರರ ಪ್ರತಿಭಟನೆ.ಪೊಲೀಸರ ಗುಂಡಿಗೆ ಇಬ್ಬರ ಬಲಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST


ಹೈದರಾಬಾದ್ : ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಸೋಮವಾರ ವಿವಾದಾತ್ಮಕ ಶಾಖೋತ್ಪನ್ನ ವಿದ್ಯುತ್ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದ ಮೀನುಗಾರರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ಸತ್ತು ಇತರ 15 ಮಂದಿ ತೀವ್ರವಾಗಿ  ಗಾಯಗೊಂಡಿದ್ದಾರೆ.
 ಘಟಕಕ್ಕೆ ಅಗತ್ಯವಾದ ಯಂತ್ರೋಪಕರಣಗಳನ್ನು ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ತರಲಾಗುತ್ತಿದ್ದು ಆಗ ಗಲಾಟೆ ಆಗಬಹುದು ಎಂದು ಭಾವಿಸಲಾಗಿತ್ತು. ಈ ಕಾರಣಕ್ಕೆ ಯೋಜನಾ ಸ್ಥಳದಿಂದ ಅರ್ಧ ಕಿ.ಮೀ. ದೂರದಲ್ಲಿರುವ ವಡ್ಡಿತಂಡ್ರ ಗ್ರಾಮದಲ್ಲಿ ಮೀನುಗಾರರನ್ನು ತೆರವುಗೊಳಿಸಲು ಯತ್ನಿಸಿದಾಗ ಘರ್ಷಣೆ ಆರಂಭವಾಯಿತು.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಬ್ಬಿಣದ ಸಲಾಕೆ, ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದಾಗ ಪೊಲೀಸರು ಗುಂಡು ಹಾರಿಸಿದರು ಎನ್ನಲಾಗಿದೆ. ಮೀನುಗಾರರಾದ ಜಿ. ನಾಗೇಶ್ವರರಾವ್ ಮತ್ತು ಈರಯ್ಯ ಗುಂಡೇಟಿನಿಂದ ಅಸು ನೀಗಿದ್ದಾರೆ.

ಈಸ್ಟ್ ಕೋಸ್ಟ್ ಎನರ್ಜಿ ಪ್ರೈ. ಲಿಮಿಟೆಡ್ (ಇಸಿಇಪಿಎಲ್) 2640 ಮೆಗಾವಾಟ್ ಸಾಮರ್ಥ್ಯದ  ಶಾಖೋತ್ಪನ್ನ ವಿದ್ಯುತ್ ಘಟಕ ನಿರ್ಮಿಸುವುದರ ವಿರುದ್ಧ ಸುಮಾರು 20 ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಗ್ರಾಮಗಳಲ್ಲಿ ಬಂದೋಬಸ್ತ್ ಕೈಗೊಂಡು ಸುಮಾರು ಒಂದು ವಾರದವರೆಗೆ ತಮ್ಮ ಹೋರಾಟವನ್ನು ನಿರ್ಬಂಧಿಸಿದ ಪೊಲೀಸರ ವಿರುದ್ಧ ಮೀನುಗಾರರು ಸಿಟ್ಟಿಗೆದ್ದಿದ್ದರು.

ಸೋಮವಾರ ಕಲ್ಲು, ಕೋಲುಗಳನ್ನು ಹಿಡಿದು ಮೀನುಗಾರರು, ಮಹಿಳೆಯರು ಪೊಲೀಸರೊಂದಿಗೆ ಕಾದಾಡಿದರು. ಕಾಕರಪಲ್ಲಿಯಲ್ಲಿ ಗ್ರಾಮಸ್ಥರು ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿ ಪೊಲೀಸ್ ವ್ಯಾನ್‌ವೊಂದಕ್ಕೆ ಬೆಂಕಿ ಹಚ್ಚಿದರು. ಆರಂಭದಲ್ಲಿ ಪೊಲೀಸರು ಪ್ರತಿಭಟನಾಕಾರರತ್ತ ಅಶ್ರುವಾಯು ಶೆಲ್ ಸಿಡಿಸಿದರು ಮತ್ತು ರಬ್ಬರ್ ಗುಂಡುಗಳನ್ನು ಬಳಸಿದ್ದರು. ಕೊನೆಗೆ ಗುಂಪನ್ನು ನಿಯಂತ್ರಿಸಲು ಗುಂಡು ಹಾರಿಸಲು ನಿರ್ಧರಿಸಿದರು.

ವಡ್ಡಿತಂಡ್ರ ಗ್ರಾಮದಲ್ಲಿ ಅನಿಲ ಶೆಲ್‌ಗಳಿಂದಾಗಿ 50 ಗುಡಿಸಲುಗಳು ಹೊತ್ತಿ ಉರಿದವು. ಗ್ರಾಮಸ್ಥರು ಸಮೀಪದ ಟೆಕ್ಕಳಿ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ಸೇರಿಸಿದರು.ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು ಗುಂಡು ಹಾರಿಸುವುದು ಅನಿವಾರ್ಯವಾಯಿತು. ಮಾರ್ಚ್ 10ರವರೆಗೆ ಇಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಎಸ್ಪಿ ಗೋಪಾಲ ರಾವ್ ತಿಳಿಸಿದ್ದಾರೆ.  ಸಿಪಿಐ ರಾಜ್ಯ ಘಟಕ ಮತ್ತು ಮಾನವ ಹಕ್ಕು ವೇದಿಕೆಗಳು ಘಟನೆಯನ್ನು ಖಂಡಿಸಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ಗುಂಡು ಹಾರಿಸಲು ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು  ಸ್ಥಳದಲ್ಲಿರುವ ಪೊಲೀಸ್ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದೂ ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.