ADVERTISEMENT

ಶಾ ಬೆಂಗಾವಲು ವಾಹನಕ್ಕೆ ಕಲ್ಲೇಟು

ತಿರುಪತಿ: ಆಂಧ್ರಕ್ಕೆ ವಿಶೇಷ ಸ್ಥಾನ ನೀಡುವಂತೆ ಆಗ್ರಹ

ಪಿಟಿಐ
Published 11 ಮೇ 2018, 20:22 IST
Last Updated 11 ಮೇ 2018, 20:22 IST
ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಅಮಿತ್‌ ಶಾ ಅವರಿಗೆ ಸ್ಮರಣಿಕೆ ನೀಡಲಾಯಿತು.
ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಅಮಿತ್‌ ಶಾ ಅವರಿಗೆ ಸ್ಮರಣಿಕೆ ನೀಡಲಾಯಿತು.   

ಹೈದರಾಬಾದ್‌: ಕರ್ನಾಟಕದಲ್ಲಿ ಬಿರುಸಿನ ಪ್ರಚಾರ ಪೂರ್ಣಗೊಳಿಸಿ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಹೋದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತರ ಆಕ್ರೋಶ ಎದುರಿಸಬೇಕಾಯಿತು.

ಚಿತ್ತೂರು ಜಿಲ್ಲೆಯ ಅಲಿಪಿರಿಯಲ್ಲಿ ಟಿಡಿಪಿ ಕಾರ್ಯಕರ್ತರು ಶಾ ಕಾರಿಗೆ ಮುತ್ತಿಗೆ ಹಾಕಿ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿದರು. ಶಾ ಬೆಂಗಾವಲು ಪಡೆಯತ್ತ ಕಾರ್ಯಕರ್ತರು ಕಲ್ಲೆಸೆದಿದ್ದಾರೆ. ಒಂದು ಕಲ್ಲು ಬೆಂಗಾವಲು ವಾಹನಕ್ಕೆ ತಗುಲಿದ್ದು ಗಾಜು ಒಡೆದಿದೆ.

ಶುಕ್ರವಾರ ಬೆಳಿಗ್ಗೆ ತಿರುಪತಿ ತಲುಪಿದ ಶಾ ಅವರನ್ನು ತಿರುಮಲ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎಸ್‌. ಶ್ರೀನಿವಾಸರಾಜು ಅವರು ಶಿಷ್ಟಾಚಾರಕ್ಕೆ ಅನುಗುಣವಾಗಿ ದೇವಸ್ಥಾನಕ್ಕೆ ಕರೆದೊಯ್ದರು. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ವೆಂಕಟೇಶ್ವರನ ದರ್ಶನಕ್ಕೆ ಸಾಲು ನಿಂತಿದ್ದ ಭಕ್ತರು ಘೋಷಣೆ ಕೂಗಿದರು. ಶಾ ಅವರು ದರ್ಶನ ಮುಗಿಸಿ ಹೊರ ಬಂದಾಗ ಈ ಘೋಷಣೆ ಇನ್ನಷ್ಟು ಜೋರಾಯಿತು.

ADVERTISEMENT

ಶಾ ತಿರುಮಲ ಬೆಟ್ಟ ಇಳಿದು ಕೆಳಗೆ ಬಂದಾಗ ಅಲಿಪಿರಿ–ಗರುಡ ತಪಾಸಣಾ ಠಾಣೆಯ ಸಮೀಪ ಸೇರಿದ್ದ ಟಿಡಿಪಿ ಕಾರ್ಯಕರ್ತರು ರಸ್ತೆ ತಡೆಗೆ ಯತ್ನಿಸಿದರು. ಪ್ರತಿಭಟನಕಾರರು ಕಪ್ಪು ಪಟ್ಟಿ ಧರಿಸಿ, ಟಿಡಿಪಿ ಧ್ವಜಗಳನ್ನು ಹಿಡಿದಿದ್ದರು. ‘ಶಾ ವಾಪಸ್‌ ಹೋಗಿ’, ‘ನಮಗೆ ನ್ಯಾಯ ಬೇಕು’, ‘ವಿಶೇಷ ಸ್ಥಾನಮಾನ ನೀಡಿ’ ಎಂಬ ಘೋಷಣೆಗಳು ಮೊಳಗಿದವು.

ಶಾ ಜತೆಗಿದ್ದ ಬಿಜೆಪಿ ಕಾರ್ಯಕರ್ತರು ವಾಹನಗಳಿಂದ ಕೆಳಗಿಳಿದಾಗ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹೊಯ್‌ಕೈ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಕಲ್ಲುತೂರಾಟ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ವಶಕ್ಕೆ ಪಡೆದರು. ಶಾ ಅವರು ಸುರಕ್ಷಿತವಾಗಿ ಸಾಗುವುದಕ್ಕೆ ಅವಕಾಶ ಮಾಡಿಕೊಟ್ಟರು.

ನಾಯ್ಡು ಅತೃಪ್ತಿ
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷ ಸ್ಥಾನಮಾನದ ಬೇಡಿಕೆ ಶಾಂತಿಯುತವಾಗಿರಬೇಕು ಎಂದು ಅವರು ಹೇಳಿದ್ದಾರೆ. ಆದರೆ, ಕಲ್ಲುತೂರಾಟಕ್ಕೆ ನಾಯ್ಡು ಅವರೇ ಕಾರಣ ಎಂದು ಬಿಜೆಪಿ ಎಂಎಲ್‌ಸಿ ಸೋಮು ವೀರರಾಜು ಆರೋಪಿಸಿದ್ದಾರೆ. ಇದು ಪೂರ್ವಯೋಜಿತ ದಾಳಿ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.