ನವದೆಹಲಿ (ಪಿಟಿಐ): ಶಿರಡಿಗೆ ತೆರಳುವ ಸಾಯಿಬಾಬಾ ಭಕ್ತರು ಈಗ ನೆಮ್ಮದಿಯಾಗಿ ಅಲ್ಲಿಗೆ ಹೋಗಿ ಇಳಿದುಕೊಂಡು ಸೇವೆ ಸಲ್ಲಿಸಬಹುದು.
ಶಿರಡಿ ಸಾಯಿಬಾಬಾ ದೇವಾಲಯದ ಉಸ್ತುವಾರಿ ಹೊತ್ತಿರುವ ಟ್ರಸ್ಟ್, 15 ಸಾವಿರ ಜನರಿಗೆ ಒಮ್ಮೆಲೆ ಅವಕಾಶ ಕಲ್ಪಿಸುವ ಬೃಹತ್ ಬಹುಮಹಡಿ ಛತ್ರವನ್ನು ಅಲ್ಲಿ ನಿರ್ಮಿಸಿದ್ದು, ಮುಂದಿನ ತಿಂಗಳು ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ.
ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್, ಚೆನ್ನೈನ ಶಿರಡಿ ಸಾಯಿ ಟ್ರಸ್ಟ್ ಸಹಯೋಗದಲ್ಲಿ 125 ಕೋಟಿ ರೂಪಾಯಿ ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಈ ಛತ್ರ ನಿರ್ಮಿಸಿದೆ. ಈ ಬೃಹತ್ ಕಟ್ಟಡದಲ್ಲಿ 1,500 ಕೋಣೆಗಳು ಹಾಗೂ 200ರಷ್ಟು ಸಭಾಂಗಣಗಳಿವೆ.
ಪ್ರತಿದಿನ 30 ಸಾವಿರ ಭಕ್ತರು ಶಿರಡಿಗೆ ಬರುತ್ತಾರೆ. ಅವರಲ್ಲಿ ಬಹುತೇಕರು ಇಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ. ಅಂತಹ ಭಕ್ತಾದಿಗಳಿಗೆ ಛತ್ರದಿಂದ ಪ್ರಯೋಜನವಾಗಲಿದೆ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್‌ನ ಹಿರಿಯ ಟ್ರಸ್ಟಿ ಅಶೋಕ್ ಕಾಂಬೇಕರ್ ಹೇಳಿದ್ದಾರೆ.
ಇದಲ್ಲದೇ ಸಾಯಿ ಸಂಸ್ಥಾನ ಟ್ರಸ್ಟ್ ಶಿರಡಿ ಗ್ರಾಮ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲು 88 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದೂ ಅವರು ತಿಳಿಸಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಸುಭೋದ್ ಕಾಂತ್ ಸಹಾಯ್ ಅವರನ್ನು ತಾವು ಭೇಟಿಯಾದಾಗ, ಶಿರಡಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಕೇಳಿದ್ದಾಗಿ ಅವರು ಹೇಳಿದರು.
ಶಿರಡಿಯಲ್ಲಿ ಸಾಯಿಬಾಬಾ ಸಮಾಧಿ ನಿರ್ಮಾಣವಾಗಿ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಹಾಗೂ ಶಿರಡಿ ಸುತ್ತಲಿನ ನಲವತ್ತರಿಂದ ಐವತ್ತು ಗ್ರಾಮಗಳು ಅಭಿವೃದ್ಧಿಯಾಗುವಂತೆ ಶಿರಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವಂತೆ ಟ್ರಸ್ಟ್ ಕೇಂದ್ರಕ್ಕೆ ಮನವಿ ಮಾಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.