ADVERTISEMENT

ಶಿವಾನಿ ಭಟ್ನಾಗರ್ ಪ್ರಕರಣ: ಐಪಿಎಸ್ ಶರ್ಮಾ ಖುಲಾಸೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 10:35 IST
Last Updated 12 ಅಕ್ಟೋಬರ್ 2011, 10:35 IST

 ನವದೆಹಲಿ, (ಪಿಟಿಐ): ಕಳೆದ 1999ರಲ್ಲಿ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಪತ್ರಕರ್ತೆ ಶಿವಾನಿ ಭಟ್ನಾಗರ್ ಅವರ ಕೊಲೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಮತ್ತು ಇನ್ನಿಬ್ಬರನ್ನು ಇಲ್ಲಿನ ದೆಹಲಿ ಹೈಕೋರ್ಟ್ ಬುಧವಾರ ಆರೋಪಮುಕ್ತರನ್ನಾಗಿ ಮಾಡಿ ತೀರ್ಪು ನೀಡಿದೆ.

ಆದರೆ,  ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಾನಿ ಭಟ್ನಾಗರ್ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ನಾಲ್ಕನೇ ಆರೋಪಿ ಪ್ರದೀಪ್ ಶರ್ಮಾ ಅವರಿಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

~ಆರೋಪಿಗಳಾದ ಆರ್.ಕೆ.ಶರ್ಮಾ, ಶ್ರೀ ಭಗವಾನ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಅವರು ಸಂಶಯದ ಲಾಭದಿಂದ ಆರೋಪ ಮುಕ್ತರಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಪ್ರದೀಪ್ ಶರ್ಮಾ ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿಯಲಾಗಿದೆ~ ಎಂದು ನ್ಯಾಯಮೂರ್ತಿಗಳಾದ ಬಿ.ಡಿ.ಅಹ್ಮದ್ ಮತ್ತು ಮನಮೋಹನ್ ಸಿಂಗ್ ಅವರ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಪತ್ರಕರ್ತೆ ಶಿವಾನಿ ಭಟ್ನಾಗರ್ ಅವರನ್ನು 1999ರ ಜನೆವರಿ 23ರಂದು ಪೂರ್ವ ದೆಹಲಿಯ ಐಪಿ ಬಡಾವಣೆಯ ನವಕುಂಜ್ ಬಹುಮಹಡಿ ಕಟ್ಟಡದಲ್ಲಿನ ಅವರ ನಿವಾಸದಲ್ಲಿ ಕೊಲೆ ಮಾಡಲಾಗಿತ್ತು.

ADVERTISEMENT

ಕಳೆದ 2008ರ ಮಾರ್ಚ್ 24 ರಂದು, ಈ ಪ್ರಕರಣದಲ್ಲಿ ಆರೋಪಿತರಾಗಿದ್ದ ಒಂದು ಕಾಲದಲ್ಲಿ ಪ್ರಧಾನಿ ಅವರ ಕಚೇರಿಯಲ್ಲಿ ವಿಶೇಷ ಸೇವೆಯ ಮೇಲೆ ನಿಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಆರ್.ಕೆ.ಶರ್ಮಾ ಸೇರಿದಂತೆ ನಾಲ್ವರಿಗೆ ಶಿಕ್ಷೆ ವಿಧಿಸಿತ್ತು. ಅದೇ ಸಂದರ್ಭದಲ್ಲಿ ಕೆಳ ನ್ಯಾಯಾಲಯವು ಪ್ರಕರಣದಲ್ಲಿ ಸಹಆರೋಪಿತರಾಗಿದ್ದ ದೇವಪ್ರಕಾಶ್ ಶರ್ಮಾ ಮತ್ತು ವೇದ್ ಅಲಿಯಾಸ್ ಕುಲು ಎಂಬವರನ್ನು ಖುಲಾಸೆ ಮಾಡಿ ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.