ADVERTISEMENT

ಶಿಸ್ತಿನ ಪ್ರತಿಭಟನೆಗೆ ಮಹಾರಾಷ್ಟ್ರದ ರೈತರು ಮಾದರಿ: ಮುಖ್ಯಮಂತ್ರಿ ಫಡಣವೀಸ್ ಶ್ಲಾಘನೆ

ಏಜೆನ್ಸೀಸ್
Published 12 ಮಾರ್ಚ್ 2018, 11:58 IST
Last Updated 12 ಮಾರ್ಚ್ 2018, 11:58 IST
ದೇವೇಂದ್ರ ಫಡಣವೀಸ್ (ಸಂಗ್ರಹ ಚಿತ್ರ)
ದೇವೇಂದ್ರ ಫಡಣವೀಸ್ (ಸಂಗ್ರಹ ಚಿತ್ರ)   

ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಸಂದರ್ಭ ಮಹಾರಾಷ್ಟ್ರದ ರೈತರು ಮತ್ತು ಬುಡಕಟ್ಟು ಜನರು ತೋರಿರುವ ಶಿಸ್ತಿನ ನಡವಳಿಕೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ರಸ್ತೆ ಸಂಚಾರಕ್ಕೆ ಅಡ್ಡಿ ಮಾಡದೆ, 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳುವುದಕ್ಕೆ ಅಡಚಣೆಯಾಗುವುದನ್ನು ತಪ್ಪಿಸುವುದಕ್ಕಾಗಿ ಮಧ್ಯರಾತ್ರಿ ಸರ್ವೀಸ್ ರಸ್ತೆಯಲ್ಲಿ ಜಾಥ ನಡೆಸಿದ ಮಹಾರಾಷ್ಟ್ರದ ರೈತರ, ಬುಡಕಟ್ಟು ಜನರ ಶಿಸ್ತನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಕೊಂಡಾಡಿದ್ದಾರೆ.

‘ತಮ್ಮ ಹಕ್ಕಿಗಾಗಿ ಶಿಸ್ತಿನಿಂದ ಹೇಗೆ ಪ್ರತಿಭಟನೆ ಮಾಡಬಹುದು ಎಂಬುದನ್ನು ಮಹಾರಾಷ್ಟ್ರದ ರೈತರಿಂದ ಕಲಿಯಬೇಕಿದೆ. ಇವರು ಇತರರಿಗೆ ಮಾದರಿ’ ಎಂದು ಫಡಣವೀಸ್ ಹೇಳಿದ್ದಾರೆ.

ADVERTISEMENT

ರೈತರ ಬೇಡಿಕೆಗಳ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭಲ್ಲಿ ಫಡಣವೀಸ್ ಅವರು, ರೈತರ ಶಿಸ್ತಿನ ಪ್ರತಿಭಟನೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ರೈತರ ಬೇಡಿಕೆಗಳ ಬಗ್ಗೆ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದೂ ಅವರು ವಿಧಾನಸಭೆಗೆ ತಿಳಿಸಿದ್ದಾರೆ.

ಶಿಸ್ತಿನಿಂದ 180 ಕಿಲೋಮೀಟರ್ ದೂರ ಕ್ರಮಿಸಿರುವ ರೈತರ ಜಾಥಕ್ಕೆ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಅನೇಕ ಮಂದಿ ರೈತರ ಶಿಸ್ತಿನ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ತಮ್ಮ ಬೆಳೆಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸುಮಾರು 50 ಸಾವಿರ ರೈತರು ಜಾಥ ನಡೆಸಿದರು. ಕೊನೆಯ ಹಂತದಲ್ಲಿ ಅವರು 10ನೇ ತರಗತಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದನ್ನು ತಡೆಯಲು ಮಧ್ಯರಾತ್ರಿ ಮೆರವಣಿಗೆ ನಡೆಸಿದರು. ಅವರಿಗೆ ಸಲ್ಯೂಟ್’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಜತೆಗೆ, ಚಪ್ಪಲಿರಹಿತವಾಗಿ ನಡೆದು ರೈತರ ಪಾದಗಳಿಗಾಗಿರುವ ಗಾಯಗಳ ಚಿತ್ರವನ್ನೂ ಲಗತ್ತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.