ADVERTISEMENT

ಶೀಘ್ರದಲ್ಲೇ ನ್ಯಾಟ್‌ಗ್ರಿಡ್ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ನವದೆಹಲಿ (ಐಎಎನ್‌ಎಸ್): ಶಂಕಿತ ಭಯೋತ್ಪಾದಕರ ಬಗ್ಗೆ ಕೇಂದ್ರೀಕೃತ ಮಾಹಿತಿಯನ್ನು ತ್ವರಿತವಾಗಿ ಪಡೆಯುವ ಉದ್ದೇಶದಿಂದ ಆರಂಭಿಸಲಾಗುವ ರಾಷ್ಟ್ರೀಯ ಗುಪ್ತಚರ ಮಾಹಿತಿ ಗ್ರಿಡ್ (ನ್ಯಾಟ್‌ಗ್ರಿಡ್) ನಿಂದ ವ್ಯಕ್ತಿಯ ಖಾಸಗಿ ವಿಚಾರಕ್ಕೆ ಧಕ್ಕೆಯಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಸ್ಪಷ್ಟಪಡಿಸಿದ್ದಾರೆ. 

ವ್ಯಕ್ತಿಗತ ಮಾಹಿತಿ ಕಲೆಹಾಕಲು ಬಳಸುವ ಹೊಸ ತಂತ್ರಜ್ಞಾನದ ಬಗ್ಗೆ ಸಹಜವಾಗಿ ಜನರಲ್ಲಿ ಆತಂಕ ಮೂಡಿದ್ದು, ಯಾವುದೇ ರೀತಿಯಲ್ಲಿ ಖಾಸಗಿ ವಿಷಯ ಬಹಿರಂಗವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನ್ಯಾಟ್‌ಗ್ರಿಡ್ ಸ್ಥಾಪನೆಗೆ ಸಂಬಂಧಿಸಿದಂತೆ ಸಂಪುಟದ ಒಪ್ಪಿಗೆ ಪಡೆಯಲು ಕಳೆದ ವಾರ ಚಿದಂಬರಂ ಅವರು ಹರಸಾಹಸ ಮಾಡಬೇಕಾಯಿತು.ಅಡೆತಡೆಯಿಲ್ಲದೆ ಎಲ್ಲಾ ಮಾಹಿತಿಯನ್ನು ಗೃಹ ಸಚಿವಾಲಯ ಪಡೆಯಲು ಸಾಧ್ಯವಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿ ರಕ್ಷಣೆ ಮತ್ತು ಹಣಕಾಸು ಸಚಿವರು ನ್ಯಾಟ್‌ಗ್ರಿಡ್‌ಗೆ ವಿರೋಧಿಸಿದ್ದರಿಂದ ಈ ಯೋಜನೆ 2010 ಡಿಸೆಂಬರ್‌ನಿಂದಲೂ ನೆನೆಗುದಿಗೆ ಬಿದ್ದಿತ್ತು.

ಸ್ವತಃ ಗೃಹ ಸಚಿವರಿಗೆ ಮಾಹಿತಿಯನ್ನು ನೋಡುವುದಕ್ಕೆ ಅವಕಾಶ ಇರುವುದಿಲ್ಲ. ಗೃಹ ಸಚಿವಾಲಯದ ಬೆರಳೆಣಿಕೆಯ ಅಧಿಕಾರಿಗಳು ಮಾತ್ರ ಅಗತ್ಯ ಬಿದ್ದಾಗ ಮಾಹಿತಿಯನ್ನು ನೋಡುವ ವ್ಯವಸ್ಥೆ ಇರುತ್ತದೆ. 2,800 ಕೋಟಿ ರೂಪಾಯಿಗಳ ಈ ಯೋಜನೆ 18 ತಿಂಗಳಲ್ಲಿ ಜಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ನ್ಯಾಟ್‌ಗ್ರಿಡ್ ಯಾವುದೇ ವ್ಯಕ್ತಿಯ ವೈಯಕ್ತಿಕ ವಿವರದ ಅಂಕಿಅಂಶಗಳನ್ನು ಶೇಖರಿಸಿ ಇಟ್ಟುಕೊಳ್ಳುವುದಿಲ್ಲ. ಬದಲಿಗೆ ಅನುಕ್ರಮಣಿಕೆಯನ್ನು ಮಾತ್ರ ಇಟ್ಟುಕೊಳ್ಳುತ್ತದೆ. ವೈಯಕ್ತಿಕ ವಿವರ  ಸೋರಿಕೆಯಾಗುವುದನ್ನು ತಡೆಯಲು ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.

ಈ ಹೊಸ ವ್ಯವಸ್ಥೆಗೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಚಿದಂಬರಂ ತಾವೊಬ್ಬರೇ ಬುದ್ದಿವಂತರು ಎಂದು ತಿಳಿದುಕೊಂಡು ಈ ಯೋಜನೆ ರೂಪಿಸಿದಂತಿದೆ ಎಂದು ಅರುಣ್ ಜೇಟ್ಲಿ ಟೀಕಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.