ADVERTISEMENT

ಶುಂಗ್ಲು ಸಮಿತಿ ವರದಿ: ಕ್ರಮದ ವಿವರ ನೀಡಲು ಸರ್ಕಾರ ನಕಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟಗಳಿಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದಲ್ಲಿ ಹಣಕಾಸು ಮತ್ತು ಆಡಳಿತಾತ್ಮಕ ಅವ್ಯವಹಾರಗಳು ನಡೆದಿರುವ ಬಗ್ಗೆ ತನಿಖೆ ನಡೆಸಿ, ಶುಂಗ್ಲ ಸಮಿತಿ ಸಲ್ಲಿಸಿರುವ ವರದಿಯ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ವಿವರ ನಿಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ಈ ಸಂಬಂಧ ಮಾಹಿತಿ ಹಕ್ಕುಗಳ (ಆರ್‌ಟಿಐ) ಅರ್ಜಿಗೆ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯವು, ಪಾರದರ್ಶಕತೆ ಕಾಯ್ದೆಯ ಅಧಿನಿಯಮವನ್ನು ಉಲ್ಲೇಖಿಸಿ, ಶುಂಗ್ಲು ಸಮಿತಿ ವರದಿ ಮೇಲಿನ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ವ್ಯವಹಾರಪತ್ರಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ.

ಉನ್ನತ ಮಟ್ಟದ ಸಮಿತಿಯ ವರದಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಿರಿಯ ಸಚಿವರ ತಂಡ ಪರಿಶೀಲಿಸಿ, ಅಭಿಪ್ರಾಯ ಮಂಡಿಸಲಿದ್ದು, ವಿವಿಧ ಇಲಾಖೆ/ಸಚಿವಾಲಯ/ಸರ್ಕಾರಗಳ ಶಿಫಾರಸುಗಳನ್ನು ಅವಲೋಕಿಸಲಿದೆ. ಆದರೆ ಇಂತಹ ವಿವರಗಳನ್ನು ಬಹಿರಂಗಪಡಿಸಲಾಗದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.