ADVERTISEMENT

ಶೃಂಗೇರಿ ಶ್ರೀಗಳಿಗೆ ಇರಿಸಿದ್ದ ಪೀಠ ತೆಗೆಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST
ಶೃಂಗೇರಿ ಶ್ರೀಗಳಿಗೆ ಇರಿಸಿದ್ದ ಪೀಠ ತೆಗೆಸಿದ ಸಚಿವ
ಶೃಂಗೇರಿ ಶ್ರೀಗಳಿಗೆ ಇರಿಸಿದ್ದ ಪೀಠ ತೆಗೆಸಿದ ಸಚಿವ   

ತಿರುವನಂತಪುರ: ಇಲ್ಲಿಯ ಸರ್ಕಾರಿ ಕಾರ್ಯಕ್ರಮದ ವೇದಿಕೆಯ ಮೇಲೆ ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗಾಗಿ ಹಾಕಲಾಗಿದ್ದ ಭವ್ಯ ಪೀಠವನ್ನು ಕೇರಳದ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಕಡಕಂಪಳ್ಳಿ ಸುರೇಂದ್ರನ್   ತೆಗೆಸಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಒಳಗಾಗಿದೆ.

ಮಿತ್ರಾನಂದಪುರದ ಪುಷ್ಕರಣಿ ಪುನರುಜ್ಜೀವನ ಸಂಬಂಧ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶೃಂಗೇರಿ ಸ್ವಾಮಿಗಳಿಗೆ ಅಧಿಕೃತವಾಗಿ ಆಹ್ವಾನ ನೀಡದಿದ್ದರೂ  ಅವರು ಬರಬಹುದು ಎಂಬ ಕಾರಣಕ್ಕೆ ಸಿಂಹಾಸನದ ಮಾದರಿಯಲ್ಲಿ ಅಲಂಕರಿಸಿದ ಪೀಠ ಇರಿಸಲಾಗಿತ್ತು.

ಆದರೆ  ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ವಿಶೇಷ ವ್ಯವಸ್ಥೆ ಸರಿಯಲ್ಲ ಎಂದು ಸುರೇಂದ್ರನ್ ಪೀಠವನ್ನು ತೆಗೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ವಿ. ಎಸ್. ಶಿವಕುಮಾರ್ ಅವರೂ ಇದ್ದರು.

ADVERTISEMENT

ಶೃಂಗೇರಿ ಸ್ವಾಮಿಗಳು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಅವರ ಪ್ರತಿನಿಧಿ ಒಬ್ಬರು ಕಾರ್ಯಕ್ರಮದಲ್ಲಿ ಹಾಜರಿದ್ದರೂ ವೇದಿಕೆ ಮೇಲೆ ಬರಲಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಠಾಧೀಶರಿಗೆ ಮತ್ತು ಸಚಿವರಿಗೆ ಅನಗತ್ಯ ಮಹತ್ವ ನೀಡುವುದು ಸರಿಯಲ್ಲ ಎಂಬ ಸಚಿವರ ನಿಲುವನ್ನು ಬೆಂಬಲಿಸಿ ಅನೇಕರು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಯಾವುದೇ  ಮಠಾಧೀಶರಿಗೆ ಅಧಿಕೃತ ಆಮಂತ್ರಣ ಕಳುಹಿಸಿರಲಿಲ್ಲ ಮತ್ತು ಸರ್ಕಾರಿ ಕಾರ್ಯಕ್ರಮದಲ್ಲಿ ಮಠಾಧೀಶರಿಗೆ ವಿಶೇಷ ಮಹತ್ವ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಅಲಂಕೃತ ಪೀಠ ತೆಗೆಸಲಾಯಿತು ಎಂದು ಸುರೇಂದ್ರನ್ ಹೇಳಿದ್ದಾರೆ.
****
ಕೇರಳ ಸರ್ಕಾರ ಸ್ವಾಮೀಜಿ ಅವರನ್ನು ಅವಮಾನಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಲಾಗಿದೆ. ಅದಕ್ಕೆ ಯಾರೂ ಕಿವಿಗೊಡಬಾರದು
ವಿ.ಆರ್.ಗೌರಿಶಂಕರ್‌, ಶೃಂಗೇರಿ ಶಾರದಾಪೀಠದ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.