ADVERTISEMENT

ಶೇ 10ರಷ್ಟು ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2016, 19:35 IST
Last Updated 6 ಸೆಪ್ಟೆಂಬರ್ 2016, 19:35 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ: ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಟ್ಟರೆ ಶೇ 10ರಷ್ಟು ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಜಲ ವಿವಾದ ತಜ್ಞರು ಅಭಿಪ್ರಾಯ ಪಡುತ್ತಾರೆ.

‘ಈ ಆದೇಶದಿಂದ ಕರ್ನಾಟಕದ ಕಾವೇರಿ ಕಣಿವೆ ಸದ್ಯಕ್ಕೆ ತೀರಾ ವಿಚಲಿತಗೊಳ್ಳುವ ಕಾರಣವಿಲ್ಲ. ಅವರು ಮುಂದೆ ಮಾಡುವ ತರ್ಕದ ಪ್ರಕಾರ ಉದಾರ ಲೆಕ್ಕಾಚಾರ ಹಿಡಿದರೂ ಉಳಿದಿರುವ ಹಾಲಿ ಜಲವರ್ಷದಲ್ಲಿ ಕರ್ನಾಟಕದ ಕಾವೇರಿ ನೀರಿನ  ಅಗತ್ಯ 120 ಟಿ.ಎಂ.ಸಿ.ಅಡಿಗಳು. ಕುಡಿಯುವ ಮತ್ತು ನೀರಾವರಿ ಅಗತ್ಯವನ್ನು ಕನಿಷ್ಠಕ್ಕೆ ಇಳಿಸಿಕೊಂಡರೆ 90 ಟಿ.ಎಂ.ಸಿ. ಅಡಿಗಳಾದರೂ ಬೇಕೇ ಬೇಕು.

‘ಮೂವತ್ತು ಟಿ.ಎಂ.ಸಿ. ಅಡಿಗಳಷ್ಟು ನೀರನ್ನು ಬಳಸಿಕೊಂಡ ನಂತರ ಇದೀಗ ನಾಲ್ಕೂ ಜಲಾಶಯಗಳಲ್ಲಿರುವ ಒಟ್ಟು ನೀರಿನ ಸಂಗ್ರಹ ತುಸು ಹೆಚ್ಚು ಕಡಿಮೆ 50 ಟಿ.ಎಂ.ಸಿ. ಅಡಿಗಳು. ಕಾವೇರಿ ಸಂಕಷ್ಟದ ವರ್ಷಗಳ ಪೈಕಿ ಒಡೆದು ಕಾಣುವ ಇತ್ತೀಚಿನ ವರ್ಷ 2012-13ರದು. ಸಂಕಟದ ವರ್ಷದಲ್ಲೂ ಕನಿಷ್ಠ 40 ಟಿ.ಎಂ.ಸಿ. ಅಡಿಗಳಷ್ಟು ನೀರು ರಾಜ್ಯದ ಕಾವೇರಿ ಜಲಾಶಯಗಳಿಗೆ ಹರಿದು ಬಂದ ಉದಾಹರಣೆ ಇದೆ.

‘ಇದೀಗ ದಿನಕ್ಕೆ ಹದಿನೈದು ಸಾವಿರ ಕ್ಯೂಸೆಕ್ ಲೆಕ್ಕದಲ್ಲಿ ಹತ್ತು ದಿನಗಳ ಅವಧಿಯಲ್ಲಿ ಒಟ್ಟು 13 ಟಿ.ಎಂ.ಸಿ. ಅಡಿಗಳಷ್ಟು ನೀರನ್ನು ತಮಿಳುನಾಡಿಗೆ ತಲುಪಿಸಬೇಕೆಂಬುದು ಸುಪ್ರೀಂ ಕೋರ್ಟ್ ತಾಕೀತು. ಎಂಟು ಸಾವಿರ ಕ್ಯೂಸೆಕ್ ಕಾವೇರಿ ನೀರು ಈಗಾಗಲೆ ನಿತ್ಯ ತಮಿಳುನಾಡಿಗೆ ಹರಿಯುತ್ತಿದೆ. ಮಧ್ಯಂತರ ಜಲಾನಯನದಲ್ಲಿ ಮಳೆ ಮತ್ತು ಬಸಿಯುವಿಕೆಯಿಂದ ಉತ್ಪತ್ತಿಯಾಗಿ ಹರಿಯುವ ಈ ನೀರಿನ ಮೇಲೆ ಕರ್ನಾಟಕದ ನಿಯಂತ್ರಣವಿಲ್ಲ ನಿಜ. ಆದರೆ ಹರಿಯುವುದು ಕರ್ನಾಟಕದಿಂದಲೇ ಆಗಿರುವ ಕಾರಣ ಬಿಡುಗಡೆಯ ಲೆಕ್ಕಕ್ಕೆ ಈ ನೀರು ಜಮಾ ಆಗುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದ ಹದಿನೈದು ಸಾವಿರ ಕ್ಯೂಸೆಕ್ ಪೈಕಿ ಎಂಟು ಸಾವಿರ ಈಗಾಗಲೆ ಬಿಡುಗಡೆ ಆಗುತ್ತಿದೆ. ಉಳಿದಂತೆ ಜಲಾಶಯಗಳಿಂದ ತೂಬು ತೆರೆದು ಬಿಡಬೇಕಿರುವ ನೀರಿನ ಪ್ರಮಾಣ ಏಳು ಸಾವಿರ ಕ್ಯೂಸೆಕ್. ಹೀಗೆ ಬಿಡುಗಡೆ ಮಾಡಬೇಕಿರುವ ನೀರಿನ ಒಟ್ಟು ಪ್ರಮಾಣ ಸುಮಾರು ಎಂಟು ಟಿ.ಎಂ.ಸಿ. ಅಡಿಗಳು. ಈ ಮಟ್ಟಿಗೆ ನಮ್ಮ ಅಗತ್ಯಕ್ಕೆ ಕತ್ತರಿ ಬೀಳುತ್ತದೆ. ನಮ್ಮ ನೀರಾವರಿ ಪ್ರದೇಶ ಶೇ.10ರಷ್ಟು ಖೋತಾ ಎದುರಿಸಬೇಕಾಗಬಹುದು’ ಎನ್ನುತ್ತಾರೆ ನೀರಾವರಿ ತಜ್ಞರು.

2012ರ ಸೆಪ್ಟಂಬರ್ ತಿಂಗಳಿನಲ್ಲೂ ಇಂತಹುದೇ ಬಿಕ್ಕಟ್ಟು ಎದುರಾಗಿತ್ತು. ಸೆಪ್ಟಂಬರ್ 12ರಿಂದ 19ರ ತನಕ ಏಳು ದಿನಗಳ ಕಾಲ ನಿತ್ಯ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾಗಿ ಬಂದಿತ್ತು.

ಇದೀಗ 50 ಟಿ.ಎಂ.ಸಿ. ಅಡಿಗಳಿಗೆ ಬೇಡಿಕೆ ಇಟ್ಟಿದ್ದ ತಮಿಳುನಾಡು ಕಡೆಗೆ ಮಳೆಯ ಅಭಾವದ ಸ್ಥಿತಿಯನ್ನು ಮನ್ನಿಸಿ ತನ್ನ ಬೇಡಿಕೆಯನ್ನು 26 ಟಿ.ಎಂ.ಸಿ. ಅಡಿಗಳಿಗೆ ಇಳಿಸಿತ್ತು.  ಈ ಬೇಡಿಕೆಯ ಅರ್ಧದಷ್ಟನ್ನು (ಸುಮಾರು 13 ಟಿ.ಎಂ.ಸಿ.ಅಡಿಗಳು) ಸುಪ್ರೀಂ ಕೋರ್ಟ್ ಒಪ್ಪಿ ಆದೇಶ ನೀಡಿದೆ. 2012ರ ಆದೇಶಕ್ಕೆ ಹೋಲಿಸಿದರೆ ಈ ಆದೇಶ ರಾಜ್ಯದ ಪಾಲಿಗೆ ತುಸು ಹೆಚ್ಚು ಕಠಿಣವಾಗಿರುವುದು ನಿಜ.ಆದರೆ ರಾಜ್ಯದ ಪಾಲಿಗೆ ಈ ಸಾಲಿನ ನೈಋತ್ಯ ಮಾರುತದ ಮಳೆಗಾಲ ಇಲ್ಲಿಗೇ ಮುಗಿದು ಹೋಗಿಲ್ಲ. ಸೆಪ್ಟಂಬರ್ ಮತ್ತು ಅಕ್ಟೋಬರ್ 15ರ ಅವಧಿಯಲ್ಲಿ 80 ಟಿ.ಎಂ.ಸಿ. ಅಡಿಗಳಷ್ಟು ನೀರು ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದಿರುವ ನಿದರ್ಶನಗಳಿವೆ.

ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ಗತ್ಯಂತರ ಇರುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ನ್ಯಾಯಾಲಯ ನಿಂದನೆ ಎದುರಿಸಬೇಕಾಯಿತು. ಇದೀಗ ಐದು ದಿನಗಳ ಕಾಲ ನ್ಯಾಯಾಲಯದ ಆದೇಶವನ್ನು ಪಾಲಿಸಿ ಆನಂತರ ಇನ್ನು ಬಿಡುಗಡೆ ಸಾಧ್ಯವಿಲ್ಲ ಎಂಬುದಾಗಿ ಪುನರ್ ಪರಿಶೀಲನೆಯ ಅರ್ಜಿ ಹಾಕುವ ಆಯ್ಕೆ ರಾಜ್ಯದ ಮುಂದೆ ಇದ್ದೇ ಇದೆ ಎನ್ನುತ್ತಾರೆ ಕಾನೂನು ತಜ್ಞರು.

ಜಲ ಮಾಪನ ಕೇಂದ್ರ: ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಗೆ ಉಭಯ ರಾಜ್ಯಗಳ ಗಡಿ ಭಾಗದ ಕೇಂದ್ರೀಯ ಜಲಮಾಪನ ಕೇಂದ್ರ  ಬಿಳಿಗುಂಡ್ಲು. ಬಿಳಿಗುಂಡ್ಲುವಿನಿಂದ ತಮಿಳುನಾಡಿನ ಮೆಟ್ಟೂರು ಅಣೆಕಟ್ಚೆಯ ನಡುವಣ ದೂರ 45 ಕಿ.ಮೀ.ಗಳು. ಈ ಮಧ್ಯಂತರ  ಜಲಾನಯನ ಪ್ರದೇಶದಲ್ಲಿ ಉತ್ಪತ್ತಿ ಯಾಗುವ ನೀರು ತಮಿಳುನಾಡಿನ ಮೆಟ್ಟೂರಿಗೆ ಹರಿಯುತ್ತದೆ.

ಸುಪ್ರೀಂ ಹೀಗೆ ಹೇಳಿತ್ತು: 08.10.12ರ ಕಾವೇರಿ ತಗಾದೆಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಕಾವೇರಿ ಕಣಿವೆಯಲ್ಲಿ ನಡೆದಿದ್ದ ಚಳವಳಿಗಳ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದ ಮಾತುಗಳು-

ಚಳಿವಳಿಗಳಿಂದ ಯಾವ ಉದ್ದೇಶವೂ ನೆರವೇರುವುದಿಲ್ಲ. ಕೆಲವೊಮ್ಮೆ ಅವುಗಳಿಂದ ಉತ್ತಮ ಕೇಸೊಂದು ಕೆಟ್ಟು ಹೋಗಲೂಬಹುದು. ಈ ಇಡೀ ವಿದ್ಯಮಾನದಲ್ಲಿ ಸೂಕ್ಷ್ಮ ವಿಚಾರವೆಂಬುದು ಏನಾದರೂ ಇದ್ದರೆ ಅದು ರೈತರ ಬವಣೆ ವಿನಾ ಇನ್ನೇನೂ ಅಲ್ಲ.

ವಿವಾದದ ಹಿನ್ನೋಟ
1990ರ ಜೂನ್ ಎರಡರಂದು ರಚಿಸಲಾಗಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿ ಸುಮಾರು 16 ವರ್ಷಗಳ ಕಾಲ ಕಲಾಪ ನಡೆಸಿ 2007ರ ಫೆಬ್ರವರಿ ಐದರಂದು ತನ್ನ ಅಂತಿಮ ವರದಿ ಸಲ್ಲಿಸಿತ್ತು. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರನ್ನು 740 ಟಿ.ಎಂ.ಸಿ. ಎಂದು ಅಂದಾಜು ಮಾಡಿದ ನ್ಯಾಯಮಂಡಳಿ ತಮಿಳುನಾಡಿಗೆ 419 ಟಿ.ಎಂ.ಸಿ.ಗಳು, ಕರ್ನಾಟಕಕ್ಕೆ 270 ಟಿ.ಎಂ.ಸಿ.ಗಳು, ಕೇರಳಕ್ಕೆ 30 ಮತ್ತು ಪುದುಚೆರಿಗೆ ಏಳು ಟಿ.ಎಂ.ಸಿ.ಗಳನ್ನು ಹಂಚಿಕೆ ಮಾಡಿತ್ತು. ಪರಿಸರ ಸಂರಕ್ಷಣೆಗೆಂದು ಕಾವೇರಿ ಕೊಳ್ಳದಲ್ಲಿ 10 ಟಿ.ಎಂ.ಸಿ. ನೀರನ್ನು ಉಳಿಸಬೇಕೆಂದು ಸೂಚಿಸಿತ್ತು.

ಕಾವೇರಿ ಕಣಿವೆಯ ನೀರಿನ ಇಳುವರಿಗೆ ಕರ್ನಾಟಕದ ಕೊಡುಗೆ ಶೇ53  ಆದರೆ ಹಂಚಿಕೆಯಾಗಿರುವ ಪಾಲು ಶೇ36 ಮಾತ್ರ. ಕಾವೇರಿ ಕಣಿವೆಗೆ ಕೇವಲ ಶೇ 30ರಷ್ಟು ಕೊಡುಗೆ ನೀಡಿರುವ ತಮಿಳುನಾಡು ಇಳುವರಿಯ ಶೇ57ರಷ್ಟು ನೀರನ್ನು ಗಿಟ್ಟಿಸಿದೆ.  ಅಂದಿನ ಮಹಾರಾಜರ ಮೈಸೂರು ಬ್ರಿಟಿಷರ ಆಳ್ವಿಕೆಯ ಅಧೀನದಲ್ಲಿದ್ದ ಸಾಮಂತ ಸಂಸ್ಥಾನವಾಗಿತ್ತು. ಹೀಗಾಗಿ 1892 ಮತ್ತು 1924ರ ಒಪ್ಪಂದಗಳನ್ನು ಮೈಸೂರಿನ ಮೇಲೆ ಹೇರಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.