ADVERTISEMENT

ಶೌಚಾಲಯ ಸಮರ ಸುಖಾಂತ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಭೋಪಾಲ್ (ಪಿಟಿಐ): ಆಕೆ ಗಂಡನೊಂದಿಗೆ ಹೊಡೆದಾಡಿ ಗಾಯಗೊಂಡಿದ್ದಳು. ಗಾಯಗೊಂಡವಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು..!

ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕಾರಣಕ್ಕೆ ಗಂಡ ಹೆಂಡಿರ ನಡುವೆ ಹೊಡೆದಾಟ ನಡೆದಿತ್ತು. ವರ್ಷದಿಂದ ಬಹಿರ್ದೆಸೆಗಾಗಿ ಬಯಲನ್ನು ಆಶ್ರಯಿಸಿ, ರೋಸಿ ಹೋಗಿದ್ದ ಆಕೆ, ಹೀಗೆ ಹೊಡೆದಾಡಿಕೊಂಡು ಗಂಡನ ಮನೆ ಬಿಟ್ಟು ತವರಿಗೆ ಹೋಗಿಬಿಟ್ಟಳು. ಶೌಚಾಲಯ ಕಟ್ಟಿಸುವವರೆಗೆ ಗಂಡನ ಮನೆಗೆ ಹಿಂದಿರುಗುವುದಿಲ್ಲವೆಂದು ಶಪಥ ಮಾಡಿದಳು !

ಶೌಚಾಲಯಕ್ಕಾಗಿ ಹೋರಾಟಕ್ಕಿಳಿದ ಮಹಿಳೆಯ ಹೆಸರು ಛಾಯಾ. ನಾರಾಯಣ ನಗ್ರೆ ಆಕೆಯ ಪತಿ. ಇವರು ಮಧ್ಯಪ್ರದೇಶದ ಹರ್ದಾ ಪಟ್ಟಣದ ನಿವಾಸಿಗಳು. 

ಈ ಗಂಡ-ಹೆಂಡಿರ `ಶೌಚಾಲಯ ಸಮರ~ವನ್ನು ಮಾಧ್ಯಮದ ಮೂಲಕ ಗಮನಿಸಿದ ಸುಲಭ್ ಇಂಟರ್ ನ್ಯಾಷನಲ್‌ನ ಅಧ್ಯಕ್ಷ ಬಿಂದೇಶ್ವರ್ ಪಾಠಕ್, ಭೋಪಾಲ್‌ನಲ್ಲಿರುವ ಸ್ವಯಂ ಸೇವಾ ಸಂಸ್ಥೆಗೆ `ಶೌಚಾಲಯ ನಿರ್ಮಿಸಿಕೊಡುವಂತೆ ನಿರ್ದೇಶನ ನೀಡಿದರು.
 
ಘಟನೆ ಈಗ ಸುಖಾಂತ್ಯ ಕಂಡಿದೆ. ಗಂಡ-ಹೆಂಡತಿ ಈಗ ಒಂದಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದರು. ಪತಿಗೃಹದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ   ತವರಿನತ್ತ ಹೊರಟಿದ್ದ ಐವರು ವಧುಗಳನ್ನು ಕಳೆದ ವಾರ  ಪಾಠಕ್ ಸನ್ಮಾನಿಸಿದ್ದನ್ನು  ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.