ADVERTISEMENT

ಶ್ರೀಮಂತ ವರ್ಗದ ಯುವತಿಯೊಂದಿಗೆ ಪ್ರೇಮ ವಿವಾಹ: ಕೇರಳದಲ್ಲಿ ನವವಿವಾಹಿತನ ಮರ್ಯಾದೆಗೇಡು ಹತ್ಯೆ?

​ಪ್ರಜಾವಾಣಿ ವಾರ್ತೆ
Published 29 ಮೇ 2018, 1:59 IST
Last Updated 29 ಮೇ 2018, 1:59 IST
ಕೆವಿನ್  (ಕೃಪೆ: ಫೇಸ್‍ಬುಕ್)
ಕೆವಿನ್ (ಕೃಪೆ: ಫೇಸ್‍ಬುಕ್)   

ಕೋಟ್ಟಯಂ:  ಕ್ರೈಸ್ತ ಸಮುದಾಯದ ಶ್ರೀಮಂತ ವರ್ಗದ ಯುವತಿಯನ್ನು ವಿವಾಹವಾದ ದಲಿತ ಕ್ರೈಸ್ತ ಸಮುದಾಯದ ಕೆವಿನ್ ಕೆ.ಜೋಸೆಫ್ ಎಂಬ ಯುವಕನನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆ ಮುಂದುವರಿದಿದೆ. ಮೌಂಟ್ ಮಾವೇಲಿಪ್ಪಡಿ ವಟ್ಟಪ್ಪಾರದ ಜೋಸೆಫ್ ಎಂಬವರ ಪುತ್ರ  ಕೆವಿನ್.ಪಿ.ಜೋಸೆಫ್ (23) ಕೊಲ್ಲಂ ತೇನ್ಮಲ ಒಟ್ಟಕಲ್ 'ಶಾನು ಭವನ್' ನಿವಾಸಿ ನಿನೂ ಚಾಕೋ (20) ಎಂಬ ಯುವತಿಯನ್ನು ಪ್ರೇಮ ವಿವಾಹವಾಗಿದ್ದರು. ಕಳೆದ ಗುರುವಾರ ಇವರ ವಿವಾಹ ನಡೆದಿತ್ತು.

ಭಾನುವಾರ ಬೆಳಗ್ಗೆ ಕೆವಿನ್ ಮತ್ತು ಆತನ ಸಂಬಂಧಿ ಅನೀಶ್ ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಕೆವಿನ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆದಿತ್ತು. ಹೀಗಿರುವಾಗ ಸೋಮವಾರ ಬೆಳಗ್ಗೆ 7 ಗಂಟೆಗೆ ಪುನಲೂರಿನಿಂದ 12 ಕಿಮೀ ದೂರದಲ್ಲಿ ಚಾಲಿಯಕ್ಕರ ಎಂಬಲ್ಲಿ ಕೆವಿನ್ ಮೃತದೇಹ ಪತ್ತೆಯಾಗಿತ್ತು.

ಮರ್ಯಾದೆಗೇಡು ಹತ್ಯೆ?
ತನ್ನ ಪತಿ ಕೆವಿನ್‍ನ್ನು ತಮ್ಮ ಸಹೋದರ ಶಾನು ಸೇರಿದಂತೆ 10 ಮಂದಿ ಅಪಹರಿಸಿದ್ದಾರೆ ಎಂದು ನಿನೂ ಪೊಲೀಸರಿಗೆ ದೂರು ನೀಡಿದ್ದಳು. ನಿನೂ ಜತೆ ವಿವಾಹ ನಡೆದ ನಂತರ ತಮ್ಮ ಸಂಬಂಧಿಯಾದ ಅನೀಶ್ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಅನೀಶ್ ಮನೆಗೆ ನುಗ್ಗಿದ 10 ಮಂದಿಯ ತಂಡವೊಂದು ಕೆವಿನ್ ಮತ್ತು  ಅನೀಶ್‍ನ್ನು ಅಪಹರಿಸಿತ್ತು. ಅನೀಶ್‍ ಮೇಲೆ ತೀವ್ರ ಹಲ್ಲೆ ನಡೆಸಿದ ಈ ಗುಂಪು ಭಾನುವಾರ ಮಧ್ಯಾಹ್ನ ಕೋಟ್ಟಯಂ ಸಮೀಪ ಸಂಕ್ರಾಂತಿಕವಲದಲ್ಲಿ ಬಿಟ್ಟು ಹೋಗಿತ್ತು. ದೃಷ್ಟಿ ಮಂದವಿರುವ ಅನೀಶ್‍ನ ಕಣ್ಣಿಗೆ ತೀವ್ರ ಗಾಯಗಳಾಗಿದೆ.

ADVERTISEMENT

ನಡೆದ ಸಂಗತಿಯನ್ನು ಅನೀಶ್ ಪೊಲೀಸರಿಗೆ ತಿಳಿಸಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು. ಈ ಮಧ್ಯೆ ಪತ್ತನಾಪುರಕ್ಕೆ ತಲುಪುವಾಗ ಕೆವಿನ್ ಕಾರಿನಿಂದ ಹೊರ ಜಿಗಿದು ಓಡಿ ಹೋಗಿದ್ದಾರೆ ಎಂದು ದುಷ್ಕರ್ಮಿಗಳು ಪೊಲೀಸರಿಗೆ ತಿಳಿಸಿದ್ದರು. ಆದರೆ ಇದು ನಂಬಲರ್ಹವಲ್ಲ ಎಂದು ಸಂಬಂಧಿಕರು ಹೇಳಿದ್ದರಿಂದ ಹುಡುಕಾಟ ಮುಂದುವರಿಯಿತು.

ಜೀವ ಬೆದರಿಕೆ ಇತ್ತು
ನಿನೂವನ್ನು ಪ್ರೇಮ ವಿವಾಹವಾಗಿದ್ದಕ್ಕೆ ನಿನೂ ಕುಟುಂಬದಿಂದ ಜೀವ ಬೆದರಿಕೆ ಇತ್ತು. ಹಾಗಾಗಿ ವಿವಾಹದ ನಂತರ ನಿನೂವನ್ನು ಆಕೆ ವಾಸವಿದ್ದ ಹಾಸ್ಟೆಲ್‍‍ನಲ್ಲೇ ಇರುವಂತೆ ಕೆವಿನ್ ಹೇಳಿದ್ದ. ನಿನೂ ಭಾನುವಾರ ಬೆಳಗ್ಗೆ ಕೆವಿನ್‍ಗೆ ಫೋನ್  ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ಭಾನುವಾರ ಬೆಳಗ್ಗೆ  6 ಗಂಟೆಗೆ ದುಷ್ಕರ್ಮಿಗಳು ತನ್ನ ಮಗನನ್ನು ಅಪಹರಿಸಿದ್ದಾರೆ ಎಂದು ಕೆವಿನ್‍ನ ಅಪ್ಪ ಜೋಸೆಫ್ ಜೇಕಬ್ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದರು. ಆದರೆ ಮುಖ್ಯಮಂತ್ರಿಗಳೊಂದಿಗೆ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಪೊಲೀಸರು ಜೋಸೆಫ್ ಅವರ ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. 

ಕೆವಿನ್ ಜತೆಗೆ ಹೋಗುತ್ತೇನೆ ಎಂದು ಹೇಳಿದ್ದಳು ನಿನೂ
ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ನಿನೂ ಅಪ್ಪ ಚಾಕೋ ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಸಂಜೆ ಮೆಜಿಸ್ಟ್ರೇಟ್ ಮುಂದೆ ಹಾಜರಾದ ನಿನೂ ತಾನು ಕೆವಿನ್ ಜತೆ ಬದುಕುವುದಾಗಿ ಹೇಳಿದ್ದ ಕಾರಣ ಆಕೆಯನ್ನು ಕೆವಿನ್‍ನ ಪೋಷಕರೊಂದಿಗೆ ಇರಲು ಅನುಮತಿ ನೀಡಲಾಗಿತ್ತು.

ಕೆವಿನ್ ಹತ್ಯೆ ಸಂಚು ರೂಪಿಸಿದ್ದು ನಿನೂ ಸಹೋದರ
ಕೆವಿನ್ ಹತ್ಯೆ ಸಂಚು ರೂಪಿಸಿದ್ದು ನಿನೂ ಸಹೋದರ ಶಾನು ಚಾಕೋ ಎಂದು ಹೇಳಲಾಗುತ್ತಿದೆ.10 ಜನರ ತಂಡದ ವಿರುದ್ಧ ಕೆವಿನ್ ಹತ್ಯಾ ಪ್ರಕರಣ ಆರೋಪ ದಾಖಲಾಗಿದೆ. ಇದರಲ್ಲಿ ಮೂರು ಮಂದಿಯನ್ನು ಈಗಾಗಲೇ ಬಂಧಿಸಿದ್ದು, ಇನ್ನುಳಿದವರಿಗೆ ಹುಡುಕಾಟ ಮುಂದುವರಿದಿದೆ. ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ಲ ವಿಮಾನ ನಿಲ್ದಾಣಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.

ಇಂದು ಕೋಟ್ಟಯಂನಲ್ಲಿ ಹರತಾಳ
ಕೆವಿನ್ ಹತ್ಯೆ ಪ್ರಕರಣ ಪ್ರತಿಭಟಿಸಿ ಕೋಟ್ಟಯಂನಲ್ಲಿ ಇಂದು ಯುಡಿಎಫ್, ಬಿಜೆಪಿ ಮತ್ತು ಬಿಎಸ್‍ಪಿ ಹರತಾಳಕ್ಕೆ ಕರೆ ನೀಡಿದೆ. ಕೌನ್ಸಿಲ್ ಆಫ್ ದಲಿತ್ ಕ್ರಿಶ್ಚಿಯನ್ಸ್, ಕೇರಳ ಪುಲಯರ್ ಮಹಾಸಭಾ ಜಿಲ್ಲಾ ಸಮಿತಿ, ಅಖಿಲ ಕೇರಳ ಚೇರಮರ್ ಹಿಂದೂ ಮಹಾಸಭಾ ಹರತಾಳಕ್ಕೆ ಬೆಂಬಲ ಘೋಷಿಸಿವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಹರತಾಳ ನಡೆಯಲಿದೆ.

ಮರಣೋತ್ತರ ಪರೀಕ್ಷೆ ಇಂದು
ಸೋಮವಾರ ಬೆಳಗ್ಗೆ ಚಾಲಿಯಕ್ಕರದಲ್ಲಿರುವ ತೋಡಿನಲ್ಲಿ ಕೆವಿನ್ ಮೃತದೇಹ ಪತ್ತೆಯಾಗಿತ್ತು. ಕೋಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣೋತ್ತರ ಪರೀಕ್ಷೆಯ ವಿಡಿಯೊ ದೃಶ್ಯೀಕರಣ ಮಾಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ. ಮಧ್ಯಾಹ್ನ 12ರ ವೇಳೆಗೆ ಮೃತದೇಹವನ್ನು ಕೆವಿನ್ ಕುಟುಂಬಕ್ಕೆ ಒಪ್ಪಿಸಲಾಗುವುದು. ಸಂಜೆ3 ಗಂಟೆಗೆ ನಲ್ಲಿಡಯನ್ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.


ಆರೋಪಿ ಡಿವೈಎಫ್‍ಐ ಕಾರ್ಯಕರ್ತ ವಜಾ
ಕೆವಿನ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಬಂಧಿಸಿದ ಆರೋಪಿಗಳಲ್ಲಿ ನಿಯಾಸ್ (23) ಎಂಬಾತ ಡಿವೈಎಫ್‍ಐ ಕಾರ್ಯಕರ್ತನಾಗಿದ್ದಾನೆ. ನಿಯಾಸ್ ಇಡಮನ್ -31 ಘಟಕದ ಕಾರ್ಯದರ್ಶಿಯಾಗಿದ್ದಾನೆ. ಕೆವಿನ್‍ನ್ನು ಅಪಹರಿಸಿದ ಕಾರುಗಳಲ್ಲಿ ಒಂದು ಕಾರನ್ನು ನಿಯಾಸ್ ಚಲಾಯಿಸಿದ್ದರು ಎಂದು  ಹೇಳಲಾಗುತ್ತಿದೆ. ಪ್ರಕರಣದಲ್ಲಿ ನಿಯಾಸ್ ಹೆಸರು ಕೇಳಿಬರುತ್ತಿದ್ದಂತೆ ಆತನನ್ನು ಡಿವೈಎಫ್‍ಐ ತಮ್ಮ ಸಂಘಟನೆಯಿಂದ ವಜಾ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.