ADVERTISEMENT

ಷಾ ಅಧಿಕಾರದ ವ್ಯಾಪಾರಿ: ಕಾಂಗ್ರೆಸ್‌

ಹೇಳಿಕೆಗೆ ತಿರುಗೇಟು

ಪಿಟಿಐ
Published 10 ಜೂನ್ 2017, 19:49 IST
Last Updated 10 ಜೂನ್ 2017, 19:49 IST
ಷಾ ಅಧಿಕಾರದ ವ್ಯಾಪಾರಿ: ಕಾಂಗ್ರೆಸ್‌
ಷಾ ಅಧಿಕಾರದ ವ್ಯಾಪಾರಿ: ಕಾಂಗ್ರೆಸ್‌   

ನವದೆಹಲಿ: ಮಹಾತ್ಮ ಗಾಂಧಿ ಒಬ್ಬ ‘ಚತುರ ಬನಿಯಾ’ ಆಗಿದ್ದರು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ನೀಡಿದ್ದ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ. ಈ ಹೇಳಿಕೆಯಿಂದ ಕೆರಳಿರುವ ಕಾಂಗ್ರೆಸ್‌, ಷಾ ಅವರನ್ನು ‘ಅಧಿಕಾರದ ವ್ಯಾಪಾರಿ’ ಎಂದು ಜರೆದಿದೆ.

ರಾಷ್ಟ್ರಪಿತ ಮತ್ತು ಸ್ವಾತಂತ್ರ್ಯ ಚಳವಳಿಗೆ ಮಾಡಿದ ಅವಮಾನ ಇದು. ಷಾ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಮತ್ತು ಸಿಪಿಐ ಆಗ್ರಹಿಸಿವೆ.
ಷಾ ಅವರ ಹೇಳಿಕೆ ‘ಅನಗತ್ಯ ಮತ್ತು ಅನೈತಿಕ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಗಾಂಧಿ ಬಗ್ಗೆ ಇರುವ ಅಸಡ್ಡೆಯನ್ನು ಈ ಹೇಳಿಕೆ ತೋರಿಸುತ್ತದೆ ಎಂದು ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಹೇಳಿದರು.

ಬನಿಯಾ ಎಂಬುದು ವ್ಯಾಪಾರಿಗಳ ಸಮುದಾಯ. ಆದರೆ ಬನಿಯಾ ಎಂಬ ಪದವನ್ನು ನಕಾರಾತ್ಮಕ ಅರ್ಥದಲ್ಲಿಯೂ ಬಳಸಲಾಗುತ್ತಿದೆ.

ADVERTISEMENT

ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಸಿದ್ಧಾಂತ ಅಥವಾ ತತ್ವಗಳು ಇಲ್ಲ. ಸ್ವಾತಂತ್ರ್ಯ ಪಡೆಯುವುದಕ್ಕಾಗಿಯೇ ಈ ಸಂಘಟನೆಯನ್ನು ಹುಟ್ಟು ಹಾಕಲಾಗಿತ್ತು ಎಂದು ಚಂಡೀಗಡದ ಸಮಾವೇಶವೊಂದರಲ್ಲಿ ಷಾ ಹೇಳಿದ್ದರು.

‘ಬ್ರಿಟಿಷ್‌ ವ್ಯಕ್ತಿಯೊಬ್ಬ ಕ್ಲಬ್‌ ರೂಪದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸ್ಥಾಪಿಸಿದ್ದ. ನಂತರ ಅದನ್ನು ಸ್ವಾತಂತ್ರ್ಯ ಹೋರಾಟದ ಸಂಘಟನೆಯಾಗಿ ಪರಿವರ್ತಿಸಲಾಯಿತು’ ಎಂದೂ ಷಾ ಹೇಳಿದ್ದರು.

ಬೇರೆ ಬೇರೆ ಸಿದ್ಧಾಂತಗಳನ್ನು ನಂಬಿದ್ದ ಜನರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರು. ಹಾಗಾಗಿ ಕಾಂಗ್ರೆಸ್‌ಗೇ ವಿಶಿಷ್ಟವಾದ ಯಾವ ಸಿದ್ಧಾಂತವೂ ಇರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.

‘ಜಾತೀಯತೆ ವಿರುದ್ಧ ಹೋರಾಡುವ ಬದಲು ಗಾಂಧಿಯನ್ನೂ ಜಾತಿಯ ಹೆಸರಿನಲ್ಲಿ ಗುರುತಿಸಲು ಬಿಜೆಪಿ ಬಯಸುತ್ತಿದೆ.  ಇದು ಆಡಳಿತ ಪಕ್ಷ ಮತ್ತು ಅದರ ಅಧ್ಯಕ್ಷರ ವ್ಯಕ್ತಿತ್ವ ಮತ್ತು ಸಿದ್ಧಾಂತವನ್ನು ತೋರಿಸುತ್ತದೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಟೀಕಿಸಿದರು.

ಸ್ವತಃ ಅಧಿಕಾರದ ವ್ಯಾಪಾರಿಯಾಗಿರುವ ಅಮಿತ್‌ ಷಾ ಸ್ವಾತಂತ್ರ್ಯ ಚಳವಳಿಯನ್ನೂ ವ್ಯಾಪಾರದ ಮಾದರಿ ಎಂದು ಹೇಳುತ್ತಿದ್ದಾರೆ. ಆದರೆ ಸ್ವಾತಂತ್ರ್ಯಕ್ಕೆ ಮೊದಲು ದೇಶ ವಿಭಜನೆಗಾಗಿ ಆರ್‌ಎಸ್‌ಎಸ್‌ ಮತ್ತು ಹಿಂದೂ ಮಹಾಸಭಾವನ್ನು ಬ್ರಿಟಿಷರು ಬಳಸಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.

* ದೂರದೃಷ್ಟಿಯುಳ್ಳ ಚತುರ ಬನಿಯಾ ಆಗಿದ್ದ ಮಹಾತ್ಮ ಗಾಂಧಿ ಸ್ವಾತಂತ್ರ್ಯ ದೊರೆತ ತಕ್ಷಣ ಕಾಂಗ್ರೆಸನ್ನು ಬರ್ಖಾಸ್ತು ಮಾಡಬೇಕು ಎಂದು ಹೇಳಿದ್ದರು.

–ಅಮಿತ್‌ ಷಾ, ಬಿಜೆಪಿ ಅಧ್ಯಕ್ಷ

* ಮಹಾತ್ಮ ಗಾಂಧಿ ಜಗತ್ತೇ ಆದರಿಸುವ ಸಂಕೇತ. ಅಧಿಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಬಾರದು.

–ಮಮತಾ ಬ್ಯಾನರ್ಜಿ,  ಮುಖ್ಯಮಂತ್ರಿ

* ರಾಷ್ಟ್ರಪಿತ ಮತ್ತು ಸ್ವಾತಂತ್ರ್ಯ ಚಳವಳಿಯನ್ನು ಅವಮಾನಿಸಿದ್ದಕ್ಕಾಗಿ ಅಮಿತ್‌ ಷಾ,ಪ್ರಧಾನಿ ಕ್ಷಮೆಯಾಚಿಸಬೇಕು.

–ರಣದೀಪ್‌ ಸುರ್ಜೆವಾಲಾ, ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.