ADVERTISEMENT

ಷಾ ಪುನರಾಯ್ಕೆ: ಬಿಜೆಪಿ ಹಿರಿಯರ ಗೈರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2016, 20:12 IST
Last Updated 24 ಜನವರಿ 2016, 20:12 IST
ಷಾ ಪುನರಾಯ್ಕೆ: ಬಿಜೆಪಿ ಹಿರಿಯರ ಗೈರು
ಷಾ ಪುನರಾಯ್ಕೆ: ಬಿಜೆಪಿ ಹಿರಿಯರ ಗೈರು   

ನವದೆಹಲಿ (ಪಿಟಿಐ): ಅಮಿತ್ ಷಾ ಅವರು ಬಿಜೆಪಿ ಅಧ್ಯಕ್ಷರಾಗಿ ಎರಡನೇ ಅವಧಿಗೂ ಅವಿರೋಧ ಆಯ್ಕೆಯಾಗಿದ್ದಾರೆ. ಭಾನುವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಸ್ವತಃ ಪ್ರಧಾನಿ ಮೋದಿ, ಕೇಂದ್ರ ಸಂಪುಟದ ಹಿರಿಯ ಸಚಿವರು ಮತ್ತು ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಷಾ  ಹೆಸರನ್ನು ಸೂಚಿಸಿದ್ದರು.

ಮೋದಿ, ಪಕ್ಷದ ಪ್ರಭಾವಿ ನಾಯಕರು ಮತ್ತು ಆರ್ಎಸ್ಎಸ್ ಪ್ರಮುಖರು ಷಾ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಬಯಸಿದ್ದರಿಂದ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.

ಅಡ್ವಾಣಿ, ಜೋಶಿ ಗೈರು: ಅಮಿತ್ ಷಾ ಅವರ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪಕ್ಷದ ಹಿರಿಯ ಧುರೀಣರಾದ ಎಲ್. ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಚುನಾವಣೆ ಸಂದರ್ಭದಲ್ಲಿ ಗೈರು ಹಾಜರಿದ್ದರು.

2014ರ ಮೇನಲ್ಲಿ ರಾಜನಾಥ್ ಸಿಂಗ್ ಅವರು ಮೋದಿ ಸಂಪುಟ ಸೇರಿದ ನಂತರ ಮೂರು ವರ್ಷಗಳ ಅವಧಿಯ ಉಳಿದ ಭಾಗಕ್ಕೆ ಷಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಪುನರಾಯ್ಕೆ ಆಗಿರುವುದರಿಂದ 3 ವರ್ಷಗಳ ಅಧ್ಯಕ್ಷರಾಗಿ ಇರುತ್ತಾರೆ.

ಅಡ್ವಾಣಿ ಆಶೀರ್ವಾದ: ಅಮಿತ್ ಷಾ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಇನ್ನೊಬ್ಬ ಹಿರಿಯ ಮುಖಂಡ ಮುರಳಿ ಮನೋಹರ್ ಜೋಷಿ ಪಶ್ಚಿಮ ಬಂಗಾಳದಿಂದ ವಾಪಸ್ ಆದ ಮೇಲೆ ಅವರನ್ನು ಷಾ ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಅಭಿನಂದನೆ: ಹಂತಹಂತವಾಗಿ ಮೇಲೆ ಬಂದಿರುವ ಷಾ ಅವರಿಗೆ ಅಪಾರ ಸಂಘಟನಾ ಅನುಭವವಿದೆ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.