ಶೆಹ್ಲಾ ಪ್ರಕರಣ: ಸಿಬಿಐಗೆ ವಶಕ್ಕೆ ಆರೋಪಿ
ಕಾನ್ಪುರ (ಪಿಟಿಐ): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಕೊಲೆ ಪ್ರಕರಣದ ಆರೋಪಿ ಸುಪಾರಿ ಹಂತಕ ಇರ್ಫಾನ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಸೋಮವಾರ ತನ್ನ ವಶಕ್ಕೆ ಪಡೆದುಕೊಂಡಿದೆ.
ಇರ್ಫಾನ್‌ನನ್ನು ವಶಕ್ಕೆ ಪಡೆದಿರುವ ಇಂದೋರ್‌ನಿಂದ ಆಗಮಿಸಿದ್ದ ಸಿಬಿಐ ಅಧಿಕಾರಿಗಳ ತಂಡ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಭೋಪಾಲ್‌ಗೆ ಕರೆದೊಯ್ಯುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿದ್ದ ವಾರೆಂಟ್‌ನಿಂದ ಆಗಮಿಸಿದ್ದ ಸಿಬಿಐ ಅಧಿಕಾರಿಗಳು ಜಿಲ್ಲಾ ಕಾರಾಗೃಹ ಅಧಿಕಾರಿಗಳಿಗೆ ವಾರೆಂಟ್ ಹಸ್ತಾಂತರಿಸಿದ್ದರು. ಕಾರಾಗೃಹ ಅಧಿಕಾರಿಗಳು ಅನುಮತಿ ಕೋರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದರು.
ಮನವಿ ಪುರಸ್ಕರಿಸಿದ ನ್ಯಾಯಾಲಯ ಭೋಪಾಲ್‌ಗೆ ಕರೆದೊಯ್ಯುವ ಸಿಬಿಐ ಬೇಡಿಕೆಗೆ ಅನುಮತಿ ನೀಡಿತು.
ಶೆಹ್ಲಾ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತ ಬಾಡಿಗೆ ಹಂತಕ ಇರ್ಫಾನ್‌ನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಫೆಬ್ರುವರಿ 27ರಂದು ಬಂಧಿಸಿತ್ತು.
ಹೇಳಿಕೆ ಪಡೆದ ಎಟಿಎಸ್
ಮುಂಬೈ (ಪಿಟಿಐ): ವಾಣಿಜ್ಯ ನಗರದಿಯಲ್ಲಿ ಕಳೆದ ಜುಲೈ 13ರಂದು ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ನಕ್ವಿಯ ಸಹೋದರನ ಹೇಳಿಕೆಯನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಸೋಮವಾರ ಪಡೆದರು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಟಿಎಸ್ ಅಧಿಕಾರಿಗಳ ತಂಡದ ಎದುರು ಎರಡನೇ ದಿನವೂ ಹಾಜರಾದ ತಕ್ವಿ ಅಹ್ಮದ್ ಹೇಳಿಕೆ ನೀಡಿದ. ಸತತ ಎರಡು ದಿನಗಳ ಕಾಲ ಆರೋಪಿಯ ವಿಚಾರಣೆ ನಡೆಸಿರುವ ತಂಡ ಅನೇಕ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ ಎನ್ನಲಾಗಿದೆ.
ನವದೆಹಲಿಯ ಜಾಮಿಯಾ ನಗರದಲ್ಲಿ ಈ ಸಹೋದರರು ತೆರೆದಿರುವ ಅಂಗಡಿಗೆ ಹೂಡಲಾದ ಹಣದ ಮೂಲ ಮತ್ತು ಅಂಗಡಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ವ್ಯಕ್ತಿಗಳ ಕುರಿತು ಪ್ರಶ್ನಿಸಲಾಗಿದೆ. ಝವೇರಿ ಬಜಾರ್, ಒಪೇರಾ ಹೌಸ್, ದಾದರ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ್‌ದ ಮುನ್ನಾದಿನ ಮತ್ತು ನಂತರ ಇಬ್ಬರ ವಾಸ್ತವ್ಯ, ಒಡಾಟದ ಕುರಿತು ವಿಚಾರಣೆ ನಡೆಸಲಾಗಿದೆ. ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಯಾಸಿನ್ ಭಟ್ಕಳ್ ಈ ಸಮಾರಂಭದಲ್ಲಿ ಭಾಗವಹಿಸಿದ್ದ ಎನ್ನುವ ಸುಳಿವು ಅಧಿಕಾರಿಗಳಿಗೆ ದೊರೆತಿದೆ.
ಸಿಎಟಿ ಮೆಟ್ಟಿಲೇರಿದ ಮಾಧವನ್
ಕೊಚ್ಚಿ (ಐಎಎನ್‌ಎಸ್): ಸರ್ಕಾರಿ ಹುದ್ದೆಯಿಂದ ತಮ್ಮನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಸೋಮವಾರ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಯ ಮೆಟ್ಟಿಲೇರಿದ್ದಾರೆ.
ಸರ್ಕಾರ ಏಕಪಕ್ಷೀಯವಾಗಿ ತಮ್ಮ ವಿರುದ್ಧ ಈ ಕ್ರಮ ಕೈಗೊಂಡಿದ್ದು, ಅಭಿಪ್ರಾಯ ಮಂಡಿಸಲು ತಮಗೆ ಅವಕಾಶ ನೀಡಿಲ್ಲ ಎಂದು ನಾಯರ್ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಮಂಗಳವಾರ ಅಥವಾ ಬುಧವಾರ ನ್ಯಾಯಮಂಡಳಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ನಾಯರ್ ಇಸ್ರೊ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಅಂತರಿಕ್ಷ್-ದೇವಾಸ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿತ್ತು. ಈ ನಿರ್ಧಾರದಿಂದಾಗಿ ನಾಯರ್ ಅವರು ಕೊಚ್ಚಿಯಲ್ಲಿರುವ ಇಸ್ರೊದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್‌ಟಿ)ಯ ಗೌರವ ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.