ADVERTISEMENT

ಸಂಗ್ಮಾ ಮೊಬೈಲ್ ಬಳಸಿ ಬ್ಯಾಂಕ್ ಸಿಬ್ಬಂದಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 11:25 IST
Last Updated 8 ಫೆಬ್ರುವರಿ 2011, 11:25 IST

  ಶಿಲ್ಲಾಂಗ್ (ಪಿಟಿಐ): ಲೋಕಸಭೆಯ ಮಾಜಿ ಅಧ್ಯಕ್ಷ ಪಿ.ಎ.ಸಂಗ್ಮಾ ಅವರ ಮೊಬೈಲ್ ನಂಬರ್ ಬಳಸಿ ವ್ಯಕ್ತಿಯೊಬ್ಬ ಬ್ಯಾಂಕ್ ಉದ್ಯೋಗಿಯೊಬ್ಬನಿಂದ ಹಣ ಪಡೆದು ವಂಚಿಸಿದ ಪ್ರಕರಣ ಮೇಘಾಲಯದ ವೆಸ್ಟ್ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

 ಮೇಘಾಲಯ ಅಪೆಕ್ಸ್ ಸಹಕಾರಿ ಬ್ಯಾಂಕ್ ನ ತಾರಾ ಶಾಖೆಯ ಉದ್ಯೋಗಿ ಶ್ಯಾಂಗಥೊ ಸಲ್ಗಿರಿಯಾ ಡಿ ಸಂಗ್ಮಾ, ಎಂಬವರಿಗೆ ಕರೆ ಮಾಡಿದ ವ್ಯಕ್ತಿ, ಸದ್ಯ ತಾರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಪಿ.ಎ.ಸಂಗ್ಮಾ ಅವರ ಮೊಬೈಲ್ ನಂಬರ್ ಬಳಸಿ 25,000 ರೂ ದೋಚಿದ್ದಾನೆ ಎಂದು ಸಂಗ್ಮಾ ಅವರ ಕಾರ್ಯದರ್ಶಿ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಯಾಂಕ್ ಉದ್ಯೋಗಿಗೆ ಸಂಗ್ಮಾ ಅವರ ಮೊಬೈಲ್ ನಂಬರ್ ನಿಂದ ಫೋನ್ ಮಾಡಿದ ವ್ಯಕ್ತಿ, ಉದ್ಯೋಗಿಯು ವ್ಯಕ್ತಿಗತವಾಗಿ ತನಗೆ ತಕ್ಷಣ 25,000 ರೂಪಾಯಿ  ನೀಡುವಂತೆ ಕೋರಿದ್ದಾನೆ. ಪ್ರತಿಯಾಗಿ 50 ಸಾವಿರ ರೂಪಾಯಿ ಹಿಂದಿರುಗಿಸುವುದಾಗಿ ತಿಳಿಸಿದ್ದಾನೆ.

ಉದ್ಯೋಗಿ, ಆ ಅಪರಿಚಿತ ವ್ಯಕ್ತಿ ಸಂಗ್ಮಾ ಅವರಿಗೆ ತೀರ ಹತ್ತಿರದವನಿರಬೇಕು ಎಂದುಕೊಂಡು, ಜನವರಿ 4 ಮತ್ತು 5 ರಂದು ತಲಾ 10 ಸಾವಿರ ಮತ್ತು ಜನವರಿ 7 ರಂದು 5 ಸಾವಿರ ರೂಗಳನ್ನು ಆ ವ್ಯಕ್ತಿ ತಿಳಿಸಿದ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಿದ್ದಾರೆ.

ADVERTISEMENT

ತರಬೇತಿಗೆ ಪರವೂರಿಗೆ ತೆರಳಿದ್ದ ಬ್ಯಾಂಕ್ ಉದ್ಯೋಗಿ ಮರಳಿ ಬಂದಾಗ, ಮಾತುಕೊಟ್ಟಂತೆ ಆ ಅಪರಿಚಿತ ವ್ಯಕ್ತಿ ಹಣ ಹಿಂದಿರುಗಿಸದೇ ಇದ್ದದು ಅವರ ಗಮನಕ್ಕೆ ಬಂದಿದೆ . ನಂತರ ಆ ಬ್ಯಾಂಕ್ ಉದ್ಯೋಗಿಯ ಪತ್ನಿ ಸಂಗ್ಮಾ ಅವರ ಕಾರ್ಯದರ್ಶಿಯನ್ನು ಕಂಡು ಈ ವಿಷಯ ತಿಳಿಸಿದಾಗ ಪತಿ ಮೋಸ ಹೋದದ್ದು ಪತ್ತೆಯಾಗಿದೆ. ಏಕೆಂದರೆ ತುಂಬಾ ದಿನಗಳ ಹಿಂದಿನಿಂದ ಸಂಗ್ಮಾ ಅವರು ಆ ನಂಬರಿನ ಮೊಬೈಲ್ ಅನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.