ADVERTISEMENT

ಸಂಘ ಸಂಧಾನ: ಮಣಿದ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಚಾರ ಸಮಿತಿ ಸಾರಥ್ಯ ವಹಿಸಿದ ಪಕ್ಷದ ನಿರ್ಧಾರದ ವಿರುದ್ಧವೇ ತಿರುಗಿಬಿದ್ದು `ಶಸ್ತ್ರತ್ಯಾಗ' ಮಾಡಿದ್ದ ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ ಅವರ ಕೋಪವನ್ನು ಶಮನಗೊಳಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ       (ಆರ್‌ಎಸ್‌ಎಸ್) ಕೊನೆಗೂ ಯಶಸ್ವಿಯಾಗಿದೆ. ಆ ಮೂಲಕ ಎರಡು ದಿನಗಳ ರಾಜಕೀಯ ನಾಟಕಕ್ಕೆ ತೆರೆ ಎಳೆದಿದೆ.

ಬಿಜೆಪಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ 85 ವರ್ಷದ ಹಿರಿಯ ನಾಯಕ ಅಡ್ವಾಣಿ ಅವರ ರಾಜೀನಾಮೆ ಪ್ರಹಸನ, ಎರಡು ದಿನಗಳಿಂದ ಪಕ್ಷದಲ್ಲಿ ನಡೆದ ಹಲವಾರು ನಾಟಕೀಯ ಬೆಳವಣಿಗೆಗಳ ಕೊನೆಯಲ್ಲಿ ಸುಖಾಂತ್ಯ ಕಂಡಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ನಡೆಸಿದ ಮನವೊಲಿಕೆ ಕಸರತ್ತು ವಿಫಲವಾಗಿ ಕೈಚೆಲ್ಲಿ ಕುಳಿತ ನಂತರ ಕೊನೆಗೆ ಅನಿವಾರ್ಯವಾಗಿ ಸಂಘದ ನಾಯಕರು ನೇರವಾಗಿ ಮೈದಾನಕ್ಕೆ ಇಳಿಯಬೇಕಾಯಿತು.

ಪಕ್ಷದಲ್ಲಿಯ ಇತ್ತೀಚಿನ ಬೆಳವಣಿಗೆಗಳಿಂದ ಮುನಿಸಿಕೊಂಡಿದ್ದ ಅಡ್ವಾಣಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ಮಾತುಕತೆ ನಡೆಸಿದ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ್, ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. `ಬಿಜೆಪಿ ಸಂಸದೀಯ ಮಂಡಳಿ ನಿರ್ಧಾರವನ್ನು ಗೌರವಿಸಿ ಪಕ್ಷಕ್ಕೆ ಮಾರ್ಗದರ್ಶನ ನೀಡಿ' ಎಂಬ ಭಾಗ್ವತ್ ಸಲಹೆಯನ್ನು ಅಡ್ವಾಣಿ ಒಪ್ಪಿಕೊಂಡರು. 

ಈ ಸುದ್ದಿ ತಿಳಿಯುತ್ತಲೇ ಎರಡು ದಿನಗಳಿಂದ ಮಂಕು ಕವಿದಿದ್ದ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿತು. ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಹಾಗೂ ಇತರ ಹಿರಿಯ ನಾಯಕರೊಂದಿಗೆ ಅಡ್ವಾಣಿ ಅವರ ನಿವಾಸಕ್ಕೆ ಧಾವಿಸಿದ ರಾಜನಾಥ್ ಸಿಂಗ್ ಅಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ `ಭಾಗ್ವತ್ ಸಲಹೆ ಮೇರೆಗೆ ಅಡ್ವಾಣಿ ಅವರು ರಾಜೀನಾಮೆ ವಾಪಸ್ ಪಡೆದಿದ್ದಾರೆ' ಎಂದು ಘೋಷಿಸಿದರು.

ಕಾಣಿಸಿಕೊಳ್ಳದ ಅಡ್ವಾಣಿ: ತಮ್ಮ ಮನೆಯಲ್ಲಿಯೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಪ್ಪಿತಪ್ಪಿಯೂ ಅಡ್ವಾಣಿ ಕಾಣಿಸಿಕೊಳ್ಳಲಿಲ್ಲ. ಇದು ಅನೇಕ ಸಂಶಯಗಳಿಗೆ ಕಾರಣವಾಯಿತು. ಹಾಗೆಯೇ ಸಂಧಾನದ ಹಿಂದಿನ ಸೂತ್ರಗಳೂ ಗೌಪ್ಯವಾಗಿವೇ ಉಳಿದವು. ಈ ಕುರಿತ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಸಿಂಗ್ ಪತ್ರಿಕಾಗೋಷ್ಠಿಯಿಂದ ತೆರಳಿದರು. 

`ಇದು ನನ್ನ ಪತ್ರಿಕಾಗೋಷ್ಠಿಯಾದ ಕಾರಣ ನಿಮ್ಮಂತಹ ಹಿರಿಯರು ನನ್ನ ಮಾತನ್ನು ಕೇಳುತ್ತ ಕುಳಿತುಕೊಳ್ಳುವುದು ಸರಿ ಕಾಣದು. ಹೀಗಾಗಿ ನೀವು ಪತ್ರಿಕಾಗೋಷ್ಠಿಗೆ ಹಾಜರಾಗುವುದು ಬೇಡ ಎಂದು ನಾನೇ ಅವರಲ್ಲಿ ಮನವಿ ಮಾಡಿದ್ದೆ' ಎಂದು ರಾಜನಾಥ್ ಸಿಂಗ್ ಅವರು ಅಡ್ವಾಣಿ ಗೈರು ಹಾಜರಿಯ ಬಗ್ಗೆ ಸಮಜಾಯಿಷಿ ನೀಡಿದರು.

ಆದರೆ, ಈ ಎಲ್ಲ ಬೆಳವಣಿಗೆಗಳ ಕೇಂದ್ರ ಬಿಂದುವಾಗಿರುವ ಅಡ್ವಾಣಿ ಮಾತ್ರ ಎಲ್ಲಿಯೂ ಬಹಿರಂಗವಾಗಿ ತಮ್ಮ ನಿರ್ಧಾರವನ್ನು ತಿಳಿಸಿಲ್ಲ. ಅವರ ಅಸಮಾಧಾನಕ್ಕೆ ಕಾರಣವಾಗಿದ್ದ ಪಕ್ಷದ ಕಾರ್ಯವೈಖರಿ ಹಾಗೂ ಅವರು ಎತ್ತಿದ ಇನ್ನಿತರ ಸಮಸ್ಯೆಗಳಿಗೆ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಿಂಗ್ ಚುಟುಕಾಗಿ ಉತ್ತರಿಸಿದರು.

ಕೈಚೆಲ್ಲಿದ್ದ ನಾಯಕರು: ಇದಕ್ಕೂ ಮೊದಲು ಅಡ್ವಾಣಿ ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಶಿ, ಜಸ್ವಂತ್ ಸಿಂಗ್, ವೆಂಕಯ್ಯ ನಾಯ್ಡು, ಉಮಾ ಭಾರತಿ, ಗೋಪಿನಾಥ್ ಮುಂಡೆ, ಬಲ್ಬೀರ್ ಪೂಂಜ್, ರಾಂಲಾಲ್, ಅನಂತಕುಮಾರ್, ಆರತಿ ಮೆಹ್ರಾ, ರವಿಂಶಕರ್ ಪ್ರಸಾದ್ ಸೇರಿದಂತೆ ಬಹುತೇಕರು ತಮ್ಮ ಪ್ರಯತ್ನದಲ್ಲಿ ಯಶ ಕಾಣದೇ   ಕೈಚೆಲ್ಲಿದ್ದರು. 

ಸೋಮವಾರ ರಾತ್ರಿ ಸಭೆ ಸೇರಿದ್ದ ಬಿಜೆಪಿ ಪ್ರಮುಖರ ಸಮಿತಿ `ಅಡ್ವಾಣಿ ಪಕ್ಷದ ನಾಯಕ ಮತ್ತು ಮಾರ್ಗದರ್ಶಕ' ಎಂಬ ನಿರ್ಣಯ ಕೈಗೊಂಡಿತ್ತು. `ಪಕ್ಷವನ್ನು ಮುನ್ನಡೆಸುವ ಮತ್ತು ಮಾರ್ಗದರ್ಶನ ಮಾಡುವ ಹೊಣೆಯನ್ನು ಅವರೇ ನಿಭಾಯಿಸಬೇಕು.

ಹಿಂದೆಂದಿಗಿಂತಲೂ ಇಂದು ಬಿಜೆಪಿ ಮತ್ತು ರಾಷ್ಟ್ರಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ. ಹೀಗಾಗಿ ಅವರ ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ' ಎಂದು ಪ್ರಮುಖರ ಸಮಿತಿ ಅಭಿಪ್ರಾಯಪಟ್ಟಿತ್ತು.

ಅಡ್ವಾಣಿ ಅವರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್, ಬಿಜೆಪಿ ಮೇಲೆ ಒತ್ತಡ ಹೇರಿತ್ತು ಎಂಬ ಮಾಧ್ಯಮದ ವರದಿಗಳನ್ನು ರಾಜನಾಥ್ ಸಿಂಗ್ ಸ್ಪಷ್ಟವಾಗಿ ನಿರಾಕರಿಸ್ದ್ದಿದಾರೆ. `ಅಡ್ವಾಣಿ ರಾಜೀನಾಮೆಗೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ಸಂಘ ಬಿಜೆಪಿಗೆ ಯಾವುದೇ ನಿರ್ದೇಶನವನ್ನೂ ನೀಡಿಲ್ಲ. ಪಕ್ಷದ ಆಂತರಿಕ ವಿಚಾರದಲ್ಲಿ ಅದು ಹಸ್ತಕ್ಷೇಪ ಮಾಡಿಲ್ಲ. ಆದರೆ, ಕಾಂಗ್ರೆಸ್ ಅನಗತ್ಯವಾಗಿ ಸಂಘದ ಹೆಸರು ಎಳೆದು ತರುತ್ತಿದೆ' ಎಂದು  ಸಿಂಗ್ ಹಾಗೂ ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.

ರಾಜಸ್ತಾನದ ಬಂಸ್‌ವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರ ಮೋದಿ ಅವರು, `ಅಡ್ವಾಣಿ ನಮ್ಮ ಮಾರ್ಗದರ್ಶಕರಾಗಿದ್ದವರು. ಇಂದಿಗೂ ಇದ್ದಾರೆ. ಮುಂದೆಯೂ ಮಾರ್ಗದರ್ಶಕರಾಗಿ ಇರುತ್ತಾರೆ' ಎಂದರು. 

`ಪಕ್ಷದ ಪ್ರಮುಖರ ಸಭೆಯು ಅಡ್ವಾಣಿ ರಾಜೀನಾಮೆ ಅಂಗೀಕರಿಸಿಲ್ಲ. ಹೀಗಿರುವಾಗ ಅವರು ರಾಜೀನಾಮೆ ಮರಳಿ ಪಡೆಯುವ ಕುರಿತಂತೆ ಪ್ರಶ್ನೆಗಳೇ ಉದ್ಭವಿಸುವುದಿಲ್ಲ' ಎಂದು ಲೋಕಸಭಾ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಈ ಮೊದಲು ಪ್ರತಿಕ್ರಿಯಿಸಿದ್ದರು.

ಮೋದಿ ಅವರಿಗೆ ವಹಿಸಲಾಗಿರುವ ಪ್ರಚಾರ ಸಮಿತಿ ಸಾರಥ್ಯ ಹೊಣೆಯ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಪಕ್ಷದಲ್ಲಿ ಅಡ್ವಾಣಿ ಅವರಿಗೆ ಸಲ್ಲಬೇಕಾದ ಎಲ್ಲಾ ಗೌರವ ಸಲ್ಲಬೇಕು. ಅವರ ಮನವೊಲಿಸಬೇಕು ಎಂಬ ತೀರ್ಮಾನಕ್ಕೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಕಾರ್ಯವೈಖರಿ ಕುರಿತು ಅಡ್ವಾಣಿ ಎತ್ತಿದ ಆಕ್ಷೇಪಗಳ ಬಗ್ಗೆ ಪಕ್ಷ ಪರಿಶೀಲಿಸಲಿದೆ.  ಶೀಘ್ರ   ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂಬ ಭರವಸೆ ಹಿನ್ನೆಲೆಯಲ್ಲಿ ಅಡ್ವಾಣಿ ರಾಜೀನಾಮೆ ವಾಪಸ್ ಪಡೆದಿದ್ದಾರೆ.

ADVERTISEMENT


ಹುಸಿಯಾಗದ ನಿರೀಕ್ಷೆ: ಮೋದಿ
ಅಡ್ವಾಣಿ ಅವರು ಲಕ್ಷಾಂತರ ಕಾರ್ಯಕರ್ತರನ್ನು ನಿರಾಶೆಗೊಳಿಸಲಾರರು ಎಂದು ನಿನ್ನೆಯೇ ಹೇಳಿದ್ದೆ. ಅವರ ಈ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ
-ನರೇಂದ್ರ ಮೋದಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.