ADVERTISEMENT

ಸಂಭ್ರಮದ ಸುಗ್ಗಿ ಹಬ್ಬ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಹೈದರಾಬಾದ್ (ಐಎಎನ್‌ಎಸ್):  ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಭಾನುವಾರ ಆಂಧ್ರಪ್ರದೇಶದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಗ್ರಾಮ, ಪಟ್ಟಣಗಳಲ್ಲಿ ಹಬ್ಬದ ವಾತಾವರಣವಿತ್ತು. ಮನೆಗಳ ಮುಂದೆ ರಂಗೋಲಿ ಹಾಕಿ, ಕಬ್ಬಿನಿಂದ, ಮಾವಿನ ತಳಿರಿನಿಂದ ಅಲಂಕರಿಸಲಾಗಿತ್ತು. ಎತ್ತುಗಳನ್ನು ಗಂಟೆ, ಗೊಂಡೆಗಳಿಂದ ಸಿಂಗರಿಸಲಾಗಿತ್ತು.

ಹಬ್ಬದ ಊಟ, ಕೋಳಿ ಕಾಳಗ, ಎತ್ತು ಓಡಿಸುವುದು, ಕಿಚ್ಚು ಹಾಯಿಸುವುದು ಇತ್ಯಾದಿ ಆಮೋದ- ಪ್ರಮೋದಗಳಲ್ಲಿ ಜನ ತೊಡಗಿಕೊಂಡಿದ್ದರು.

ಸಂಕ್ರಾಂತಿಯ ಉಲ್ಲಾಸ ಹೆಚ್ಚಿಸಲೆಂಬಂತೆ ಮಕ್ಕಳು, ದೊಡ್ಡವರೆಲ್ಲ ಹಾರಿಸಿದ ಗಾಳಿಪಟ ಆಗಸದ ತುಂಬ ಚಿತ್ತಾರ ಬರೆದಿತ್ತು.

ಸಾವಿರಾರು ಕುಟುಂಬಗಳು ಹಬ್ಬ ಆಚರಿಸಲು ಆಂಧ್ರ ಕರಾವಳಿ ಮತ್ತು ರಾಯಲ್‌ಸೀಮಾದಲ್ಲಿರುವ ಹುಟ್ಟೂರಿಗೆ ತೆರಳಿದ್ದರಿಂದ ರಾಜಧಾನಿ ಹೈದರಾಬಾದ್‌ನ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.
 
ಭುವನೇಶ್ವರ ವರದಿ: ಸಂಕ್ರಾಂತಿ ಪ್ರಯುಕ್ತ ಪುರಿಯ ಜಗನ್ನಾಥ ದೇವಾಲಯಕ್ಕೆ ಭಾನುವಾರ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದರು.

ಸೂರ್ಯ ಉತ್ತರಾಯಣ ಪ್ರವೇಶಿಸಿದ್ದಕ್ಕಾಗಿ ಕೋನಾರ್ಕ್‌ನ ಸೂರ್ಯ ದೇವಾಲಯದಲ್ಲೂ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಯಿತು.

ಈ ಹಬ್ಬದ ಅಂಗವಾಗಿ ಒಡಿಶಾದಾದ್ಯಂತ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಿಹಿ ಪೊಂಗಲ್‌ನ ಇನ್ನೊಂದು ರೂಪವಾದ `ಮಕರ ಚೌಳ್ಲಾ~ದೊಂದಿಗೆ ಜನ ಊಟ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.