ADVERTISEMENT

ಸಂಸತ್‌ನಲ್ಲಿ ಏರ್‌ಸೆಲ್- ಮ್ಯಾಕ್ಸಿಸ್ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST

ನವದೆಹಲಿ (ಪಿಟಿಐ): ಏರ್‌ಸೆಲ್- ಮ್ಯಾಕ್ಸಿಸ್ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಪಿ.ಚಿದಂಬರಂ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟುಹಿಡಿದಿದ್ದರಿಂದ ಹಾಗೂ ಗೋಲಿಬಾರ್‌ನಲ್ಲಿ  ರೈತನೊಬ್ಬ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದ್ದರಿಂದ ಮಂಗಳವಾರ ಸಂಸತ್ ಕಲಾಪಕ್ಕೆ ತೀವ್ರ ಅಡ್ಡಿಯುಂಟಾಯಿತು.

ಆದರೆ ಪ್ರತಿಪಕ್ಷಗಳ ಆರೋಪವನ್ನು ಅಲ್ಲಗಳೆದ ಸರ್ಕಾರ, ಚಿದಂಬರಂ ವಿರುದ್ಧದ ಮಾಧ್ಯಮಗಳ ವರದಿಯು ಆಧಾರರಹಿತವಾದುದು ಎಂದು ಸ್ಪಷ್ಟಪಡಿಸಿದರೂ ಆಡಳಿತ ಹಾಗೂ ಪ್ರತಿಪಕ್ಷಗಳು ಆರೋಪ, ಪ್ರತ್ಯಾರೋಪ ನಡೆಸಿದವು. ಈ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮೂರು ಬಾರಿ ಹಾಗೂ ರಾಜ್ಯಸಭೆಯನ್ನು ಎರಡು ಬಾರಿ ಮುಂದೂಡಲಾಯಿತು.

2006ರ ಏರ್‌ಸೆಲ್-ಮ್ಯಾಕ್ಸಿಸ್ ವ್ಯವಹಾರಕ್ಕೆ ಅಂದಿನ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರು ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯ (ಎಫ್‌ಐಪಿಬಿ) ಅನುಮತಿ ನೀಡಿಕೆಯನ್ನು ವಿಳಂಬಗೊಳಿಸಿದ್ದರು ಎಂಬ ವರದಿಯನ್ನು ಸರ್ಕಾರ ತಳ್ಳಿಹಾಕಿದೆ.

ಏರ್‌ಸೆಲ್‌ನ ಶೇ 73.99ರಷ್ಟು ಷೇರುಗಳನ್ನು ಖರೀದಿಸಲು ಮಾರಿಷಸ್‌ನ ಗ್ಲೋಬಲ್ ಕಮ್ಯುನಿಕೇಷನ್ ಸರ್ವಿಸಸ್ ಹೋಲ್ಡಿಂಗ್ಸ್ ಲಿ, ಬಂಡವಾಳ ಹೂಡಿದ್ದ ಬಗ್ಗೆ ಏಪ್ರಿಲ್ 28ರಂದು ಪತ್ರಿಕಾ ಹೇಳಿಕೆ ಹೊರಡಿಸಲಾಗಿತ್ತು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.