ADVERTISEMENT

ಸಂಸದರ ನಿಧಿ :ಹೊಸ ಮಾರ್ಗದರ್ಶಿ ಶೀಘ್ರ ಜಾರಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 15:40 IST
Last Updated 13 ಮಾರ್ಚ್ 2011, 15:40 IST

ನವದೆಹಲಿ, (ಪಿಟಿಐ): ಸಂಸದರ ನಿಧಿಯ ಪ್ರಮಾಣವನ್ನು ಐದು ಕೋಟಿ ರೂಪಾಯಿಗೆ ಸರ್ಕಾರ ಹೆಚ್ಚಿಸಿದೆ. ನಿಧಿಯ ಪರಿಣಾಮಕಾರಿಯಾದ ಬಳಕೆಗೆ ಸುಧಾರಿತ ಮಾರ್ಗದರ್ಶಿ ನಿಯಮಗಳೊಂದಿಗೆ ಶೀಘ್ರದಲ್ಲಿ ಬರಲಿದೆ ಎಂದು ಅಂಕಿ ಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯ ಭಾನುವಾರ ಹೇಳಿದೆ.

‘ನಾವು ಸಂಸದರ ನಿಧಿಯ ಮಾರ್ಗದರ್ಶಿ ನಿಯಮಗಳ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿದ್ದೇವೆ. ಈಗ ಹೆಚ್ಚಿನ ಹಣ ಒದಗಿಸಲಾಗಿದೆ. ಅದರ ಸರಿಯಾದ ಹಾಗೂ ಪ್ರಾಮಾಣಿಕ ಬಳಕೆ ಮಾಡುವುದಕ್ಕಾಗಿ ಕಠಿಣ ಕೆಲಸ ಮಾಡುತ್ತಿದ್ದೇವೆ’ ಎಂದು ಅಂಕಿಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ಸಚಿವ ಎಂ.ಎಸ್.ಗಿಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿ ವರ್ಷ ನೀಡುವ ಸಂಸದರ ನಿಧಿಯನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಶುಕ್ರವಾರ ಪ್ರಕಟಿಸಿದ್ದಾರೆ.ಬೆಲೆಗಳು ಹೆಚ್ಚಾಗಿರುವ ಕಾರಣದಿಂದ ಸಂಸದರ ನಿಧಿಯನ್ನು ಹೆಚ್ಚಿಸುವ ಬೇಡಿಕೆ ದೀರ್ಘ ಕಾಲದಿಂದ ಪರಿಶೀಲನೆಯಲ್ಲಿತ್ತು. ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅನೇಕ ಬಾರಿ ಈ ಅಂಶ ಪ್ರಸ್ತಾಪವಾಗಿತ್ತು.

‘ಸಂಸದರಿಗೆ ಹಂಚಿಕೆ ಮಾಡಿದ ನಿಧಿ ಯಾವಾಗಲೂ ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ಬರಬೇಕಾದ ಅಗತ್ಯವಿದೆ. ಅದು ಸರಿಯಾಗಿ ಬಳಕೆಯಾಗಬೇಕಾದ ಅಗತ್ಯ ಕೂಡ ಇದೆ. ನಾವು ಸಂಸದರಿಗೆ ಮಾಹಿತಿಯನ್ನು ಒದಗಿಸುತ್ತೇವೆ. ಸಂಸದರ ನಿಧಿಗೆ ಸಂಸತ್ತಿನ ಎರಡು     ಸಮಿತಿಗಳು ಇರುತ್ತವೆ’ ಎಂದು ಗಿಲ್ ಹೇಳಿದರು.

‘ಸಂಸದರ ನಿಧಿಯನ್ನು ಹೆಚ್ಚಿಸುವ ಅಗತ್ಯದ ಅರಿವು ನನಗೆ ಇದೆ. 1998ರಲ್ಲಿ ಸಂಸದರ ನಿಧಿಯನ್ನು ಪ್ರತಿ ವರ್ಷ ಎರಡು ಕೋಟಿಗೆ ನಿಗದಿ ಮಾಡಲಾಗಿತ್ತು’ ಎಂದು ಅವರು ಹೇಳಿದರು.‘ನಬಾರ್ಡ್ ಸಲಹಾ ಸೇವೆ (ನಬ್‌ಕೊನ್) ಈ ಯೋಜನೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಿದೆ. ಅದು ಈ ನಿಧಿಯ ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾದ ಬಳಕೆ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.