ADVERTISEMENT

ಸಂಸದ ಜಾಫ್ರಿ ಹತ್ಯೆ: ಮೋದಿಗೆ ಕ್ಲೀನ್‌ಚಿಟ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಅಹಮದಾಬಾದ್: ಗೋಧ್ರಾ ನಂತರದ ಗಲಭೆಯಲ್ಲಿ ಕಾಂಗ್ರೆಸ್ ಸಂಸದ ಜಾಫ್ರಿ ಹತ್ಯೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟಿನಿಂದ ನೇಮಕಗೊಂಡಿದ್ದ ವಿಶೇಷ ತನಿಖಾ ತಂಡ (ಸಿಟ್) ಹತ್ಯೆಯ ಹಿಂದೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕೈವಾಡ ಇಲ್ಲ ಎಂದು `ಕ್ಲೀನ್‌ಚಿಟ್~ ನೀಡಿದೆ.

ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿಟ್ ಸಲ್ಲಿಸಿರುವ ಈ ವರದಿಯಿಂದಾಗಿ ರಾಷ್ಟ್ರ ರಾಜಕಾರಣದ ಹಂಬಲ ಹೊಂದಿರುವ ಮೋದಿ ಅವರಿಗೆ ಈಗ ಹಾದಿ ಸುಗಮವಾದಂತಾಗಿದೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಹ ಯಾವುದೇ ಅಂಶ ಇಲ್ಲ ಎಂದು ಸಿಟ್ ತನ್ನ ವರದಿಯಲ್ಲಿ ತಿಳಿಸಿದೆ. ಜತೆಗೆ ಗಲಭೆ ನಿಯಂತ್ರಿಸಲು ಕ್ರಮ ಕೈಗೊಳ್ಳದಿರುವಂತೆ ಪೊಲೀಸ್ ಅಧಿಕಾರಿಗಳಿಗೆ ಮೋದಿ ಸೂಚಿಸಿದ್ದರು ಎಂದು ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಮಾಡಿದ ಆರೋಪಗಳೂ ನಿರಾಧಾರ ಎಂದು ತನಿಖಾ ತಂಡ ತನ್ನ ವರದಿಯಲ್ಲಿ ಹೇಳಿದೆ.

ಸಿಟ್‌ನ ಈ ವರದಿ ಸಹಜವಾಗಿ ಝಾಕಿಯಾ ಜಾಫ್ರಿ ಅವರಿಗೆ ಅಸಮಾಧಾನ ತಂದಿದ್ದು, ಅವರ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಸಂದರ್ಭದಲ್ಲಿ ಸಿಟ್, ಸುಪ್ರೀಂ ಕೋರ್ಟ್ ನೀಡಿರುವ ಎಲ್ಲಾ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿದೆಯೇ ಎಂದು ಕೇಳಿದ್ದಾರೆ.

ತನಿಖಾ ತಂಡ ತನ್ನ ವರದಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಕೇವಲ ವರದಿಯನ್ನಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ ಎನ್ನುವುದನ್ನು ಝಾಕಿಯಾ ಪರ ವಕೀಲ ಎಸ್.ಎಂ.ವೋರಾ ತಮ್ಮ ಅರ್ಜಿಯಲ್ಲಿ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ವರದಿ ಸಲ್ಲಿಸುವ ಸಂದರ್ಭದಲ್ಲಿ ತನಿಖಾ ತಂಡ ಯಾವ ಯಾವ ದಾಖಲೆಗಳನ್ನು ಪೂರಕವಾಗಿ ನೀಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಹೀಗಾಗಿಯೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ವರದಿಯ ಪ್ರತಿ ನೀಡುವಂತೆ ಕೋರಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.