ADVERTISEMENT

ಸಚಿವ ಖುರ್ಷಿದ್ ಹೇಳಿಕೆ: ಪ್ರಧಾನಿ ಮಧ್ಯಪ್ರವೇಶ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ನವದೆಹಲಿ (ಐಎಎನ್‌ಎಸ್/ಪಿಟಿಐ):  ಚುನಾವಣಾ ಆಯೋಗ ಮತ್ತು ಮುಸ್ಲಿಮರ ಒಳಮೀಸಲಾತಿ ಕುರಿತು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ನೀಡಿರುವ ವಿವಾದಾತ್ಮ ಹೇಳಿಕೆಯಿಂದ ಭುಗಿಲೆದ್ದಿರುವ ವಿವಾದವನ್ನು ಶಮನಗೊಳಿಸಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ.

ವಿವಾದದ ಕುರಿತು ಪ್ರಧಾನಿ ಸಿಂಗ್ ಸಂಪುಟದ ಹಿರಿಯ ಸಹೋದ್ಯೋಗಿಗಳು ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಶೀಘ್ರ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿವಾದಕ್ಕೀಡಾಗಿರುವ ಖುರ್ಷಿದ್ ಭಾನುವಾರ ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.

ತಮ್ಮ ಸಹೋದರ ರಾಹುಲ್ ಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ತಾರಾ ಪ್ರಚಾರಕಿ ಪ್ರಿಯಾಂಕಾ ಗಾಂಧಿ, `ಇಂಥ ಘಟನೆಗಳು ಚುನಾವಣೆ ಸಂದರ್ಭದಲ್ಲಿ ನಡೆಯುತ್ತವೆ~ ಎಂದು ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವತಂತ್ರವಿದ್ದು, ವಿವಾದವನ್ನು ಸಂಬಂಧಿಸಿದ ಸಂಸ್ಥೆಗಳು ಬಗೆಹರಿಸಲಿವೆ ಎಂದರು.

ಅಲಹಾಬಾದ್‌ನಲ್ಲಿ ಮಾತನಾಡಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಖುರ್ಷಿದ್ ಅವರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿಲ್ಲ. ಇದು  ಪಕ್ಷಕ್ಕೆ ಸಂಬಂಧಿಸಿದ ವಿಚಾರವಲ್ಲ. ಆದರೂ, ಪಕ್ಷ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.

ಖುರ್ಷಿದ್ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ, `ಅವರು ಯಾವುದೇ ಧರ್ಮದ ಕುರಿತು ಮಾತನಾಡುತ್ತಿಲ್ಲ. ಬದಲಾಗಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ~ ಎಂದು ಮುಂಬೈನಲ್ಲಿ ಸೋಮವಾರ ಸಮರ್ಥಿಸಿಕೊಂಡಿದ್ದಾರೆ.

`ಸೈಲೆಂಟ್ ಮೋಡ್‌ನಲ್ಲಿ ಪ್ರಧಾನಿ ಕಚೇರಿ~

 ವಿವಾದದ ಕುರಿತು ಪ್ರಧಾನಿ ವಹಿಸಿರುವ ಮೌನವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ, ಪ್ರಧಾನಿ ಕಚೇರಿ `ಸೈಲಂಟ್ ಮೋಡ್~ ನಲ್ಲಿದೆ ಎಂದು ವ್ಯಂಗ್ಯವಾಡಿದೆ.
 
ಕೂಡಲೇ ಸಚಿವ ಖುರ್ಷಿದ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಅದು ಆಗ್ರಹಿಸಿದೆ. ಸಚಿವರ ಹೇಳಿಕೆ ಕಾಂಗ್ರೆಸ್‌ನ  ನಿಜವಾದ ಬಣ್ಣವನ್ನು ಬಯಲು ಮಾಡಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಗೇಲಿ ಮಾಡಿದ್ದಾರೆ.

ಕಾನೂನೇ ಇಲ್ಲದ ಸಚಿವರು: ಗಡ್ಕರಿ
ಈ ನಡುವೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, `ಖುರ್ಷಿದ್ ಕಾನೂನು ಸಚಿವರಲ್ಲ. ಕಾನೂನೇ ಇಲ್ಲದ~ ಸಚಿವರು ಎಂದು ಕಿಡಿಕಾರಿದ್ದಾರೆ.
ಇಲ್ಲಿಯವರೆಗೂ ಅವರನ್ನು ಸಂಪುಟದಲ್ಲಿ ಮುಂದುವರೆಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.