ADVERTISEMENT

ಸಬ್ಸಿಡಿ ಸಿಲಿಂಡರ್ ಹೆಚ್ಚಳ: ಹಿಂದೆ ಸರಿದ ಕೇಂದ್ರ

ಚುನಾವಣಾ ಆಯೋಗದ ತಾಕೀತು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 11:02 IST
Last Updated 12 ಡಿಸೆಂಬರ್ 2012, 11:02 IST

ನವದೆಹಲಿ (ಪಿಟಿಐ): ಸಬ್ಸಿಡಿ ದರದ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಿತಿ ಹೆಚ್ಚಳ ಮಾಡುವುದಾಗಿ ಮಂಗಳವಾರ ಸುಳಿವು ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಕುರಿತಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಸಬ್ಸಿಡಿ ದರದ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಿತಿ ಹೆಚ್ಚಳ ಮಾಡುವ ಕುರಿತಂತೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅಲ್ಲದೇ, ಯಾವುದೇ ತೀರ್ಮಾನ ಘೋಷಣೆ ಮಾಡುವ ಮುನ್ನ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅವರು` ಒಂದು ವೇಳೆ ಸಿಲಿಂಡರ್ ಪೂರೈಕೆ ಮಿತಿ ಹೆಚ್ಚಳ ಮಾಡುವ ಕುರಿತಾದ ಪ್ರಸ್ತಾವನೆ ಸಿದ್ಧಪಡಿಸುವ ಹಾಗೂ ಘೋಷಿಸುವ ಮುನ್ನ ನಾನು ಖಂಡಿತವಾಗಿ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆಯುತ್ತೇನೆ' ಎಂದು ತಿಳಿಸಿದರು.

`ಚುನಾವಣಾ ಆಯೋಗ ಊಹಿಸಿದಂತೆ ಕೇಂದ್ರದ ಈ ಚಿಂತನೆಯ ಹಿಂದೆ ಯಾವುದೇ ರಾಜಕೀಯ ಲೆಕ್ಕಾಚಾರವಿಲ್ಲ. ಅದು ನಮ್ಮ ಉದ್ಧೇಶ ಕೂಡ ಅಲ್ಲ. ಈ ವಿಚಾರದಲ್ಲಿ ನಾವು ಸ್ಪಷ್ಟತೆ ಹಾಗೂ ಪಾರದರ್ಶಕತೆ ಹೊಂದಿದ್ದೇವೆ' ಎಂದು ಹೇಳಿದರು.

`ಖಂಡಿತವಾಗಿಯೂ ಎಲ್‌ಪಿಜಿ ಸಿಲಿಂಡರ್ ಮಿತಿಯು ಆರರಿಂದ ಒಂಬತ್ತಕ್ಕೆ ಏರಿಕೆ ಆಗುತ್ತದೆ. ಈ ಕುರಿತು ಶೀಘ್ರದಲ್ಲೇ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಮಂಗಳವಾರ ಹೇಳಿದ್ದರು.

ಮೊಯಿಲಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಚುನಾವಣಾ ಆಯೋಗ, ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಇಂತಹ ಘೋಷಣೆಯನ್ನು ಮಾಡದಂತೆ ಎಚ್ಚರಿಕೆ ನೀಡಿ ಸರ್ಕಾರಕ್ಕೆ ತಾಕೀತು ಮಾಡಿತ್ತು. ಅಲ್ಲದೇ, ಮೊಯಿಲಿ ಅವರಿಗೆ ಸ್ವಯಂ ಪ್ರೇರಿತವಾಗಿ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.