ADVERTISEMENT

ಸಮನ್ವಯ ಕೊರತೆ ಒಪ್ಪಿಕೊಂಡ ಸಚಿವ ಶಿಂಧೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ನವದೆಹಲಿ: ಮಹಾಮಳೆ, ಮೇಘ ಸ್ಫೋಟ ಮತ್ತು ಭೂಕುಸಿತದಿಂದ ಉತ್ತರಾಖಂಡದ ವಿವಿಧೆಡೆ ಸಿಕ್ಕಿ ಹಾಕಿಕೊಂಡಿರುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಇದೆ ಎಂದು ಕೇಂದ್ರ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಶನಿವಾರ ಡೆಹ್ರಾಡೂನ್‌ನಲ್ಲಿ ಒಪ್ಪಿಕೊಂಡರು. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಲು ಅವರು ಅಧಿಕಾರಿಗಳಿಗೆ ಮೂರು ದಿನಗಳ ಗಡುವು ನೀಡಿದರು.

ಆದರೆ ಸಚಿವರ ಈ ಹೇಳಿಕೆಯಿಂದ ಕೇಂದ್ರದ ಯುಪಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಶನಿವಾರ ಸಂಜೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಾರ್ತಾ ಸಚಿವ ಮನೀಶ್ ತಿವಾರಿ, `ಪರಿಹಾರ ಕಾರ್ಯದಲ್ಲಿ ತೊಡಸಿಕೊಂಡ ಇಲಾಖೆಗಳ ಮಧ್ಯೆ ಸಂಪೂರ್ಣ ಸಮನ್ವಯ ಇದೆ' ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು.

ತಪ್ಪೊಪ್ಪಿಗೆ ಧಾಟಿಯಲ್ಲಿರುವ ಶಿಂಧೆ ಹೇಳಿಕೆ `ದುರದೃಷ್ಟಕರ' ಎಂದು ಬಿಜೆಪಿ ಹೇಳಿದೆ. `ಕೇಂದ್ರ ಮತ್ತು ಉತ್ತರಾಖಂಡದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ. ಹೀಗಿರುವಾಗ ಸಚಿವರು ದೂಷಿಸುವುದು ಯಾರನ್ನು' ಎಂದು  ಎಂದು  ಬಿಜೆಪಿ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಕ್ವಿ ಪ್ರಶ್ನಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯನ್ನು ಪರಾಮರ್ಶಿಸಲು ಉತ್ತರಾಖಂಡದಲ್ಲಿರುವ ಶಿಂಧೆ, `ಇದೊಂದು ರಾಷ್ಟ್ರೀಯ ಬಿಕ್ಕಟ್ಟು' ಎಂದು ಘೋಷಿಸಿದರು. ಇನ್ನೂ ಅನೇಕ ಕಡೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 40 ಸಾವಿರ ಜನರನ್ನು ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಮತ್ತು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಪ್ರತಿಕೂಲ ವಾತಾವರಣವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದರೂ, ವಿವಿಧ ಭದ್ರತಾ ಪಡೆಗಳ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ವಿವಿಧೆಡೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ರಕ್ಷಿಸುತ್ತಿದ್ದಾರೆ' ಎಂದು ಹೇಳಿದರು.

ಗೌರಿಕುಂಡದಿಂದ ಕೇದಾರನಾಥಗೆ ಮತ್ತು ಪಾಂಡುಕೇಶ್ವರದಿಂದ ಬದರಿನಾಥಗೆ ತಾತ್ಕಾಲಿಕ ತೂಗು ಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಅನುಕೂಲವಾಗಿದೆ. ಜುಂಗಲಚೆಟ್ಟಿ ಪ್ರದೇಶದಲ್ಲಿ ಸಿಕ್ಕಹಾಕಿಕೊಂಡವರನ್ನು ರಕ್ಷಿಸಲು ಭದ್ರತಾ ಪಡೆಗಳು ಆದ್ಯತೆ ನೀಡಿವೆ ಎಂದು ಅವರು ತಿಳಿಸಿದರು.

ಮಾನವನ ತಪ್ಪಿನಿಂದಾದ ದುರಂತ ಸಂಭವಿಸಿದೆ ಎಂಬ ಆರೋಪಗಳನ್ನು ಅಲ್ಲಗಳೆದಿರುವ ಅವರು, `ಇದೊಂದು ಪ್ರಕೃತಿ ವಿಕೋಪ' ಎಂದು ಪ್ರತಿಕ್ರಿಯಿಸಿದರು.
ರಕ್ಷಣಾ ತಂಡದವರು ಪತ್ತೆಹಚ್ಚಿರುವ ಕೆಲವು ದೇಹಗಳು ತೀವ್ರ ಛಿದ್ರಗೊಂಡಿರುವುದರಿಂದ ಗುರುತಿಸುವುದು ಕಷ್ಟವಾಗಿದೆ. ಆದ್ದರಿಂದ ಇಂತಹ ದೇಹಗಳ ಡಿಎನ್‌ಎಯನ್ನು ಸಂರಕ್ಷಿಸಿ ಇಡಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.