ADVERTISEMENT

ಸರ್ಕಾರಕ್ಕೆ ಜಮಾ ಆಗದ ಭಾರಿ ಮೊತ್ತ-ಸಿಎಜಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಬಿಡುಗಡೆಯಾದ ಅನುದಾನದಲ್ಲಿ ಖರ್ಚಾಗದೆ ಉಳಿದ ಹಣವೂ ಸೇರಿದಂತೆ ಶುಲ್ಕ ಮತ್ತು ದಂಡದ ರೂಪದಲ್ಲಿ ಸಂಗ್ರಹಿಸಿದ 2,142 ಕೋಟಿ ರೂಪಾಯಿಯನ್ನು ಸರ್ಕಾರದ ಖಾತೆಗೆ ಜಮಾ ಮಾಡದಿರುವ ಐದು ನಿಯಂತ್ರಣ ಪ್ರಾಧಿಕಾರಗಳ ಕ್ರಮಕ್ಕೆ ಮಹಾಲೇಖಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್‌ಚೆಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ), ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ), ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿ ಹಣವನ್ನು ಸರ್ಕಾರಿ ಖಾತೆಯಲ್ಲಿಡದೇ ಬೇರೆ ಲೆಕ್ಕದಲ್ಲಿ ಇಟ್ಟಿರುವ ಬಗ್ಗೆ ಮಹಾಲೇಖಪಾಲರು (ಸಿಎಜಿ) ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಚಿವಾಲಯ, ಇಲಾಖೆಗಳು, ನಿಯಂತ್ರಣ ಪ್ರಾಧಿಕಾರಗಳ ಹಣವನ್ನು ಸರ್ಕಾರದ ಖಾತೆಯಲ್ಲಿಯೇ ಇಡಬೇಕು ಎಂಬ ಹಣಕಾಸು ಇಲಾಖೆಯ ನಿಯಮವನ್ನು ಈ ಐದು ನಿಯಂತ್ರಣ ಪ್ರಾಧಿಕಾರಗಳು ಉಲ್ಲಂಘಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಐದು ಪ್ರಾಧಿಕಾರಗಳು ದೊಡ್ಡ ಮೊತ್ತದ ಹಣವನ್ನು ಸರ್ಕಾರದ ಖಾತೆಯಿಂದ ಹೊರಗಿಟ್ಟಿರುವುದರಿಂದ ಕೇಂದ್ರ ಸರ್ಕಾರದ ವಾರ್ಷಿಕ ಲೆಕ್ಕದಲ್ಲಿ 2,142 ಕೋಟಿ ರೂಪಾಯಿಗಳಷ್ಟು ಕಡಿಮೆ ಹಣ ಕಂಡುಬಂದಿದೆ.2009ರ ಡಿಸೆಂಬರ್ ಮತ್ತು 2010ರ ನವೆಂಬರ್‌ನಲ್ಲಿ ಹಣಕಾಸು ಇಲಾಖೆಯು ಸೆಬಿ ಮತ್ತು ಐಆರ್‌ಡಿಎಗೆ ಮಾರ್ಗದರ್ಶಿ ಸೂತ್ರವನ್ನು ನೀಡಿ ಸರ್ಕಾರಿ ಖಾತೆಯಲ್ಲಿ ಹಣ ಜಮಾ ಮಾಡಿ ಯಾವ ರೀತಿ ಅದನ್ನು ನಿರ್ವಹಿಸಬೇಕು ಎಂಬುದನ್ನು ತಿಳಿಸಿದ್ದರೂ ಅದನ್ನು ಅನುಸರಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.