ADVERTISEMENT

ಸರ್ಕಾರಿ ಹುದ್ದೆಗೆ ಖಾಸಗಿ ಕ್ಷೇತ್ರದಿಂದ ನೇರ ನೇಮಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ನವದೆಹಲಿ: ಸರ್ಕಾರದ ಹತ್ತು ಉನ್ನತ ಹುದ್ದೆಗಳಲ್ಲಿ ಖಾಸಗಿ ವಲಯದ ಪರಿಣತ ವ್ಯಕ್ತಿಗಳನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಪರ–ವಿರೋಧ ಚರ್ಚೆಗಳು ಆರಂಭವಾಗಿವೆ.

ಸರ್ಕಾರದ ಹುದ್ದೆಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವ್ಯಕ್ತಿಗಳನ್ನು ಹಿಂಬಾಗಿಲಿನ ಮೂಲಕ ತುಂಬಲು ಸರ್ಕಾರ ನಡೆಸಿರುವ ಸಂಚು ಇದು ಎಂದು ಕಾಂಗ್ರೆಸ್ ಆರೋಪಿಸಿದೆ.

ADVERTISEMENT

‘ಈ ಮನುವಾದಿ ಸರ್ಕಾರವು ಲೋಕಸೇವಾ ಆಯೋಗವನ್ನು ಕಡೆಗಣಿಸಿ, ತನ್ನದೇ ವ್ಯಕ್ತಿಗಳನ್ನು ಸರ್ಕಾರದ ಉನ್ನತ ಹುದ್ದೆಗಳಿಗೆ ಹೇಗೆ ನೇಮಕ ಮಾಡುತ್ತದೆ? ಇದು ಸಂವಿಧಾನ ಮತ್ತು ಮೀಸಲಾತಿಯ ಉಲ್ಲಂಘನೆ. ನಾಳೆ ಇವರು ಪ್ರಧಾನಿ ಮತ್ತು ಸಂಪುಟದ ಸದಸ್ಯರನ್ನೂ ಚುನಾವಣೆ ಇಲ್ಲದೆ ನೇಮಕ ಮಾಡುತ್ತಾರೆ. ಇವರು ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿದ್ದಾರೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

ಈ ನಡೆಯ ಸಮರ್ಥನೆಗೆ ಸರ್ಕಾರ ಮುಂದಾಗಿದೆ. ‘ಇರುವುದರಲ್ಲೇ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲು ಈ ನಿರ್ಧಾರ ಅವಕಾಶ ಮಾಡಿಕೊಡಲಿದೆ. ಪ್ರತಿ ಭಾರತೀಯನ ಸಾಮರ್ಥ್ಯವನ್ನು ಅಧರಿಸಿ, ಅವರ ಬೆಳವಣಿಗೆಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮಿತಾಬ್ ಕಾಂತ್ ಸಹ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.