ADVERTISEMENT

ಸರ್ಕಾರ ರಚನೆಗೆ 'ಆಪ್' ಹಕ್ಕು ಮಂಡನೆ, ಅತಂತ್ರ ಸ್ಥಿತಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 10:31 IST
Last Updated 23 ಡಿಸೆಂಬರ್ 2013, 10:31 IST

ನವದೆಹಲಿ (ಪಿಟಿಐ): ಡಿಸೆಂಬರ್ 4ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತನ್ನಿಂದ ನೆಲಕಚ್ಚಿದ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ರಾಷ್ಟ್ರದ ರಾಜಧಾನಿಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಮೂಲಕ ಎರಡು ವಾರಗಳ ಅತಂತ್ರ ಸ್ಥಿತಿಗೆ ಆಮ್ ಆದ್ಮಿ ಪಕ್ಷವು (ಎಎಪಿ) ಸೋಮವಾರ ಕೊನೆಹಾಡಿತು.

ಜನಾಭಿಪ್ರಾಯ ಸಂಗ್ರಹದಲ್ಲಿ ಸರ್ಕಾರ ರಚಿಸಬೇಕು ಎಂಬ ವಿಚಾರಕ್ಕೆ ಪ್ರಚಂಡ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳಗ್ಗೆ ನಡೆದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯ ಬಳಿಕ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸುವ ಪತ್ರವನ್ನು ಸಲ್ಲಿಸಿದರು.

ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸಿದ 45ರ ಹರೆಯದ ಕೇಜ್ರಿವಾಲ್ ಅವರು ನೂತನ ಮುಖ್ಯಮಂತ್ರಿಯಾಗಿ ರಾಮಲೀಲಾ ಮೈದಾನದಲ್ಲಿ ನಡೆಯುವ ಬಹಿರಂಗ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಜನಲೋಕಪಾಲ ಮಸೂದೆ ಜಾರಿಗಾಗಿ ಆಗ್ರಹಿಸಿ ಅಣ್ಣಾ ಹಜಾರೆ ಅವರು ಇದೇ ಮೈದಾನದಲ್ಲಿ ಚಾರಿತ್ರಿಕ ಭ್ರಷ್ಟಾಚಾರ ವಿರೋಧಿ ಚಳವಳಿ ನಡೆಸಿದ್ದರು.

'ವಿಧಾನಸಭೆಯಲ್ಲಿ ವಿಶ್ವಾಸಗೊತ್ತುವಳಿಯನ್ನು ಮಂಡಿಸುವೆ. ಏನಾಗುತ್ತದೋ ನೋಡೋಣ' ಎಂದು ಕೇಜ್ರಿವಾಲ್ ನುಡಿದರು. ಆಮ್ ಆದ್ಮಿ ಪಕ್ಷದ ಈ ಸರ್ಕಾರ ರಾಜಧಾನಿಯ ಮೊದಲ ಅಲ್ಪಸಂಖ್ಯಾತ ಸರ್ಕಾರವೆನಿಸಿಕೊಳ್ಳಲಿದೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ನಿರ್ಧಾರವನ್ನು ತಿಳಿಸಿದ ಬಳಿಕ ಪ್ರಮಾಣವಚನ ಸಮಾರಂಭದ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಲಾಗುವುದು ಎಂದು ತಮ್ಮನ್ನು ಭೇಟಿ ಮಾಡಿದ ಕೇಜ್ರಿವಾಲ್ ಅವರಿಗೆ ನಜೀಬ್ ಜಂಗ್ ತಿಳಿಸಿದರು.

ಸರ್ಕಾರ ರಚನೆಯ ಪ್ರಸ್ತಾವವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವುದಾಗಿ ಲೆಫ್ಟಿನೆಂಟ್ ಗವರ್ನರ್ ಅವರು ಕೇಜ್ರಿವಾಲ್ ಅವರಿಗೆ ತಿಳಿಸಿದರು.

ಇದಕ್ಕೆ ಮುನ್ನ ಘಾಜಿಯಾಬಾದ್ ಜಿಲ್ಲೆಯ ಕೌಸಂಬಿಯಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ನಡೆದ ಪಿಎಸಿ ಸಭೆಯ ಬಳಿಕ ಪಕ್ಷವು ಸರ್ಕಾರ ರಚನೆಗೆ ಸಿದ್ಧವಿರುವುದಾಗಿ ತಿಳಿಸುವ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT