ADVERTISEMENT

ಸಲಿಂಗಿಗಳ ನೆರವಿಗೆ ಕೇಂದ್ರ

ಪರಿಹಾರಕ ಅರ್ಜಿ ಸಲ್ಲಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST
ಸಲಿಂಗಿಗಳ ನೆರವಿಗೆ ಕೇಂದ್ರ
ಸಲಿಂಗಿಗಳ ನೆರವಿಗೆ ಕೇಂದ್ರ   

ನವದೆಹಲಿ (ಪಿಟಿಐ):  ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ದೇಶದಾದ್ಯಂತ ವ್ಯಾಪಕ ಅತೃಪ್ತಿ – ಅಸಮಾಧಾನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಲಿಂಗಕಾಮ­ವನ್ನು ಅಪರಾಧಮುಕ್ತ­ಗೊಳಿಸುವ ಎಲ್ಲ ಆಯ್ಕೆಗಳನ್ನು ಗಂಭೀರವಾಗಿ ಪರಿಶೀಲಿಸ­ಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸುಪ್ರೀಂ ಕೋರ್ಟ್‌ನಲ್ಲಿ, ತೀರ್ಪು ಸರಿಪಡಿಸುವ ಅರ್ಜಿ (ಕ್ಯೂರೆಟಿವ್‌ ಪಿಟಿಷನ್‌) ಸಲ್ಲಿಕೆಯೂ ಈ ಆಯ್ಕೆಗಳಲ್ಲಿ ಸೇರಿದೆ ಎಂದು ಸರ್ಕಾರ ತಿಳಿಸಿದೆ.
‘ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ ಬಗ್ಗೆ ದೆಹಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪುನಃ ಸ್ಥಾಪಿಸಲು ಇರುವ ಎಲ್ಲ ಅವಕಾಶಗಳನ್ನು

ಸೋನಿಯಾ, ರಾಹುಲ್‌ ಅತೃಪ್ತಿ
ನವದೆಹಲಿ (ಪಿಟಿಐ):
ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಸತ್‌ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ.
ಸಲಿಂಗರತಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ವೈಯಕ್ತಿಕ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯ­ಬೇಕಿದೆ ಎಂದು ರಾಹುಲ್‌ ಹೇಳಿದ್ದಾರೆ.

ಕ್ಯುರೇಟಿವ್‌ ಪಿಟಿಷನ್ ಅಂದರೇನು?
ಕ್ಯುರೇಟಿವ್‌ ಪಿಟಿಷನ್‌ (ಪರಿಹಾರಕ ಅರ್ಜಿ) ಪರಿಕಲ್ಪನೆ ಬಂದಿದ್ದು 2002ರಲ್ಲಿ ಸುಪ್ರೀಂ ಕೋರ್ಟ್‌­ನ ಐವರು ನ್ಯಾಯಮೂರ್ತಿಗಳು ನೀಡಿದ ತೀರ್ಪೊಂದರ ಮೂಲಕ. ರೂಪಾ ಅಶೋಕ್‌ ಹುರ್ರಾ ಮತ್ತು ಅಶೋಕ್ ಹುರ್ರಾ ನಡುವಣ ಪ್ರಕರಣದ ತೀರ್ಪಿನಲ್ಲಿ ಪರಿಹಾರಕ ಅರ್ಜಿಯ ಕುರಿತು ನ್ಯಾಯಪೀಠ ವಿಸ್ತೃತವಾಗಿ ಚರ್ಚೆ ನಡೆಸಿದೆ.
ಸುಪ್ರೀಂ ಕೋರ್ಟ್‌ ನೀಡಿದ ಅಂತಿಮ ತೀರ್ಪು ಕೂಡ ಅರ್ಜಿದಾರ ಅಥವಾ ಪ್ರತಿವಾದಿಗೆ ಸಮಾಧಾನ ತಾರದಿದ್ದರೆ, ಪರಿಹಾರಕ ಅರ್ಜಿ ಸಲ್ಲಿಸಬಹುದು. ಆದರೆ, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇಂಥ ಅರ್ಜಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಪೀಠ ಹೇಳಿದೆ.

ಸ್ಪಷ್ಟ ನಿಲುವಿಗೆ ಬಿಜೆಪಿ ನಕಾರ
ನವದೆಹಲಿ:
ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆಯಬೇಕು. ಸೆಕ್ಷನ್‌ 377 ತಿದ್ದುಪಡಿಗೆ ಪ್ರಸ್ತಾವನೆ ಮುಂದಿರಿಸಬೇಕು. ಆಗ ತನ್ನ ನಿಲುವು ಪ್ರಕಟಿಸುವುದಾಗಿ ಬಿಜೆಪಿ ಹೇಳಿದೆ.
ವಿಷಯದ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳಲು ಬಿಜೆಪಿ ನಿರಾಕರಿಸಿದೆ.

ಸರ್ಕಾರ ಗಣನೆಗೆ ತೆಗೆದುಕೊಳ್ಳಲಿದೆ. ವಯಸ್ಕರ ನಡುವಣ ಸಮ್ಮತಿಯ ಸಂಬಂಧವನ್ನು ನಾವು ಅಪರಾಧ ಮುಕ್ತಗೊಳಿಸಲೇಬೇಕಿದೆ’ ಎಂದು ಕಾನೂನು ಸಚಿವ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಸಂವಿಧಾನ ಪೀಠ ನಿರ್ಧರಿಸಲಿ: ಸುಪ್ರೀಂ ಕೋರ್ಟ್‌ನ ತೀರ್ಪು ‘ತಪ್ಪು’ ಮತ್ತು ನಿರಾಶಾದಾಯಕ ಎಂದಿರುವ ಹಣಕಾಸು ಸಚಿವ ಪಿ.ಚಿದಂಬರಂ, ಸದ್ಯದ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಮರುಪರಿಶೀಲನೆ ಅಥವಾ ಪರಿಹಾರ ದೂರನ್ನು ಸಲ್ಲಿಸಬೇಕು ಮತ್ತು ವಿಷಯವನ್ನು  ಐವರು ನ್ಯಾಯಾಧೀಶರಿರುವ ಸಂವಿಧಾನ ಪೀಠ ವಿಚಾರಣೆ ನಡೆಸಬೇಕು ಎಂದೂ ಅವರು ಹೇಳಿದ್ದಾರೆ.

ಅತ್ಯುತ್ತಮ ಸಂಶೋಧನೆ ಹಿನ್ನೆಲೆ­ಯಲ್ಲಿ ದೆಹಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ಹೀಗಾಗಿಯೇ  ಅದನ್ನು ಸ್ವೀಕರಿಸಿದ ಕೇಂದ್ರ ಸರ್ಕಾರ ಅದರ ಮೇಲೆ ಮೇಲ್ಮನವಿ ಸಲ್ಲಿಸಿರಲಿಲ್ಲ. ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸದಿರುವುದೇ ತಮ್ಮ ಪಕ್ಷದ ನಿಲುವೂ ಆಗಿದೆ ಎಂದು ಚಿದಂಬರಂ ವಿವರಿಸಿದ್ದಾರೆ.

ಈ ಆದೇಶವನ್ನು ನೀಡಿದ ಸುಪ್ರೀಂ ಕೋರ್ಟ್‌ ಪೀಠ ವಿಷಯವನ್ನು ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸ­ಬೇಕಿತ್ತು ಎಂದಿರುವ ಚಿದಂಬರಂ, ಕಾನೂನು ಯಾವತ್ತೂ ಜಡವಾಗ­ಬಾರದು ಎಂದು ಅಭಿಪ್ರಾಯ­ಪಟ್ಟಿದ್ದಾರೆ.

377ನೇ ಸೆಕ್ಷನ್‌ 1860ರಲ್ಲಿ ರಚನೆಯಾಯಿತು. ಈ ತೀರ್ಪು ನಾವು ಆ ಕಾಲಕ್ಕೆ ಮರಳುವಂತೆ ಮಾಡಿದೆ. ಈ ಸೆಕ್ಷನ್‌ ಆ ಕಾಲದ ಸಾಮಾಜಿಕ ಮತ್ತು ನೈತಿಕ ಮೌಲ್ಯ­ಗಳನ್ನು ಪ್ರತಿಬಿಂಬಿಸುತ್ತದೆ. ಆ ಕಾಲದಲ್ಲಿ ಮನುಷ್ಯನ ದೈಹಿಕ, ಮಾನಸಿಕ ಮತ್ತು ವಂಶವಾಹಿ ವಿಷಯಗಳ ಬಗ್ಗೆ ಇದ್ದ ಜ್ಞಾನ ಅತ್ಯಲ್ಪ. ಆದರೆ 2013ರಲ್ಲಿ ಹಾಗಲ್ಲ. ಸಮ್ಮ­ತಿಯ ಸಲಿಂಗರತಿಯನ್ನು ಈಗ ನಿಸರ್ಗ ವಿರುದ್ಧ ಎಂದು ಹೇಳುವ ಹಾಗಿಲ್ಲ ಎಂದು ಚಿದಂಬರಂ ವಿವರಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಸಲಿಂಗಿ, ­ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕನಿಷ್ಠ 10 ಕೋಟಿ ಜನರಿದ್ದಾರೆ. ಹೀಗಾಗಿ ನ್ಯಾಯಾ­ಲಯ ಅಭಿಪ್ರಾಯ­ಪಟ್ಟಂತೆ ಈ ಸಮುದಾಯವನ್ನು ಅತಿ ಅಲ್ಪ­­ಸಂಖ್ಯಾತರು ಎಂದು ಹೇಳುವುದರಲ್ಲಿ ಅರ್ಥ ಇಲ್ಲ. ಒಬ್ಬನೇ ಒಬ್ಬ ವ್ಯಕ್ತಿಯ ಹಕ್ಕನ್ನೂ ರಕ್ಷಿಸಬೇಕು  ಎಂದು ಚಿದಂಬರಂ ತೀರ್ಪಿನ ಬಗ್ಗೆ ತಮ್ಮ ಅತೃಪ್ತಿ ಹೊರ­ಹಾಕಿದ್ದಾರೆ.

ಸರಿಯಾದ ತೀರ್ಪು–ಕಮಲ್‌ನಾಥ್‌: ಈ ವಿಷಯದ ಬಗ್ಗೆ ಸಂಸತ್‌ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಹಳ ಮುಖ್ಯ ವಿಷಯವೆಂದರೆ, ಸಂಸತ್‌ ಈ ವಿಷಯದ ಬಗ್ಗೆ ಕಾನೂನು ರಚಿಸಬೇಕು ಎಂದು ದೀರ್ಘ ಸಮಯದ ನಂತರ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್‌ ಹೇಳಿದ್ದಾರೆ.

ಸಂಸತ್‌ ಮತ್ತು ನ್ಯಾಯಾಂಗ ಅತ್ಯಂತ ಭಿನ್ನವಾದ ಪಾತ್ರ­ಗಳನ್ನು ಹೊಂದಿವೆ. ಈ ವಿಷಯವನ್ನು ಸಂಸತ್‌ಗೆ ಬಿಟ್ಟು­ಕೊಡುವ ಮೂಲಕ ಸುಪ್ರೀಂ ಕೋರ್ಟ್‌ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಕಮಲ್‌ನಾಥ್‌ ಅಭಿಪ್ರಾಯ­ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT