ADVERTISEMENT

ಸಲ್ಮಾನ್ ಖುರ್ಷಿದ್ ಹೇಳಿಕೆ: ಅಂತರ ಕಾಯ್ದುಕೊಂಡ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ):  `ಚುನಾವಣಾ ಆಯೋಗ ನೇಣಿಗೆ ಹಾಕಿದರೂ ಮುಸ್ಲಿಂ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಶೇ 9ರಷ್ಟು ಒಳಮೀಸಲಾತಿ ಕಲ್ಪಿಸಲು ಬದ್ಧ~ ಎಂಬ ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಹುಟ್ಟು ಹಾಕಿ ತೊಂದರೆಗೆ ಸಿಲುಕಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ನಿಲುವನ್ನು ಅವರದೇ ಪಕ್ಷವಾದ ಕಾಂಗ್ರೆಸ್ ಕೂಡಾ ಸಮರ್ಥಿಸಿಕೊಂಡಿಲ್ಲ. ಬದಲಾಗಿ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಪಕ್ಷ, ತನ್ನ ಎಲ್ಲ ನಾಯಕರಿಗೂ `ಸಾರ್ವಜನಿಕ ಜೀವನ ಮತ್ತು ನೆಲದ ಕಾನೂನು, ನೀತಿ, ನಿಯಮಗಳಿಗೆ ಅನುಸಾರವಾಗಿ ವರ್ತಿಸುವಂತೆ~ ಪರೋಕ್ಷ ಎಚ್ಚರಿಕೆ ನೀಡಿದೆ.

ಈ ಕುರಿತು ಕಾಂಗ್ರೆಸ್‌ನ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿದ್ದು `ಪಕ್ಷದ ನಾಯಕರು ಯಾವಾಗಲೂ ಈ ನೆಲದ ಕಾನೂನು ಮತ್ತು ಸಾರ್ವಜನಿಕ ಜೀವನದ ರೀತಿ, ರಿವಾಜುಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕು~ ಎಂದು ಭಾನುವಾರ ಅದು ಸಲಹೆ ನೀಡಿದೆ.

`ಚುನಾವಣಾ ಆಯೋಗ ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ಪಕ್ಷದ ಸದಸ್ಯರು ಸಂವಿಧಾನದ ಆಶಯಗಳಿಗೆ ಬದ್ಧರಾಗಿರಬೇಕು~ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಜನಾರ್ದನ ದ್ವಿವೇದಿ ಹೇಳಿದ್ದಾರೆ. `ಒಳ ಮೀಸಲಾತಿಯು ಆಡಳಿತಕ್ಕೆ ಸಂಬಂಧಿಸಿದ ವಿಷಯವೇ ಹೊರತು ಚುನಾವಣೆಗೆ ಸಂಬಂಧಿಸಿದ್ದಲ್ಲ. ಸಚಿವರ ಹೇಳಿಕೆಯನ್ನು ಪಕ್ಷ ಒಪ್ಪದು~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾನ್ಪುರದಲ್ಲಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್, ಖುರ್ಷಿದ್ ಮತ್ತು ಚುನಾವಣಾ ಆಯೋಗಕ್ಕೆ ಅವರದೇ ಆದ ಕಾರಣಗಳಿರಬಹುದು. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಎಸ್‌ಪಿಯು ಆಡಳಿತ ಯಂತ್ರವನ್ನು ಚುನಾವಣೆಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಂತಹ ಗಂಭೀರ ಲೋಪವನ್ನೂ ಆಯೋಗ ಗಮನಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಮುಗಿಬಿದ್ದ ವಿರೋಧಿಗಳು: ಖುರ್ಷಿದ್ ಹೇಳಿಕೆ ಸೃಷ್ಟಿಸಿರುವ ಹೊಸ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ವಿರೋಧ ಪಕ್ಷಗಳು, ಕಾನೂನು ಸಚಿವರ ಹೇಳಿಕೆಯಿಂದ ಸಂವಿಧಾನ ಬಿಕ್ಕಟ್ಟು ಎದುರಾಗಿದೆ ಎಂದು ಆರೋಪಿಸಿವೆ.

ಇದೊಂದು ಪೂರ್ವನಿಯೋಜಿತ ಸಂಚು ಆಗಿದ್ದು, ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದು ಬಿಜೆಪಿ, ಎಡಪಕ್ಷಗಳು ಆರೋಪಿಸಿವೆ. `ಕಾನೂನು ಮಾಡುವ ಸಚಿವರೇ ಕಾನೂನು ಉಲ್ಲಂಘಿಸಿದ್ದಾರೆ~ ಎಂದು ಟೀಕಾ ಪ್ರಹಾರ ಮಾಡಿರುವ ಅವು, ಸಂಪುಟದಿಂದ ಖುರ್ಷಿದ್ ಅವರನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿವೆ.

ಖುರ್ಷಿದ್ ಮೌನ: ಈ ನಡುವೆ, ಲಖನೌನಲ್ಲಿರುವ ಖುರ್ಷಿದ್ ತಮ್ಮ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿರುವ ಚುನಾವಣಾ ಆಯೋಗದ ಕ್ರಮದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. `ಈ ವಿಷಯವಾಗಿ ಹೇಳಬೇಕಾದದ್ದನ್ನು ಹೇಳಿಯಾಗಿದೆ. ಮಾಧ್ಯಮಗಳು ಸೇರಿದಂತೆ ಇನ್ನು ಯಾರೊಂದಿಗೆ ಈ ಕುರಿತು ಹೆಚ್ಚಿಗೆ ಮಾತನಾಡಲಾರೆ~ ಎಂದು ಅವರು ತುಟಿ ಬಿಚ್ಚಲು ನಿರಾಕರಿಸಿದರು.

ತಮ್ಮ ಪಕ್ಷದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು `ನಾನು ಕೂಡಾ ಅದನ್ನೇ ಹೇಳುತ್ತಿದ್ದೇನೆ. ಎಲ್ಲರೂ ಅವರ ಮಿತಿಯೊಳಗೆ ಇರಬೇಕು~ ಎಂದರು.

ನೆರವಿಗೆ ದಿಗ್ವಿಜಯ್: ಕಾಂಗ್ರೆಸ್‌ನ ಮತ್ತೊಬ್ಬ ಧುರೀಣ ದಿಗ್ವಿಜಯ್ ಸಿಂಗ್ ಅವರು ಖುರ್ಷಿದ್ ನೆರವಿಗೆ ಧಾವಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಮ್ಮ ಪಕ್ಷದ ಸಾಧನೆ, ಯೋಜನೆಗಳ ಕುರಿತು ಮಾತನಾಡುವ ಹಕ್ಕಿದೆ. ಹೀಗಾಗಿ ಖುರ್ಷಿದ್ ವಿರುದ್ಧ ಆಯೋಗ ಮಾಡಿರುವ ಆರೋಪ ಸರಿಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.