ADVERTISEMENT

ಸಾಮಾಜಿಕ ಜಾಲತಾಣಗಳಿಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ನವದೆಹಲಿ:  ರಾಜಕೀಯ ವ್ಯಕ್ತಿಗಳ ಅವಹೇಳನ ಮಾಡುವಂತಹ ಚಿತ್ರಗಳು ಹಾಗೂ ಇನ್ನಿತರ ಕೆಲವು ಆಕ್ಷೇಪಾರ್ಹ ಮಾಹಿತಿಗಳನ್ನು ಅಂತರಜಾಲದಲ್ಲಿ ಹಾಕಿದ್ದ ವಿದೇಶಿ ಮೂಲದ ಗೂಗಲ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ಉನ್ನತ ಕಾರ್ಯನಿರ್ವಾಹಕರಿಗೆ ಮಾರ್ಚ್ 13ರಂದು ತನ್ನ ಮುಂದೆ ಹಾಜರಾಗಬೇಕೆಂದು ದೆಹಲಿ ನ್ಯಾಯಾಲಯ ಶುಕ್ರವಾರ ಸೂಚಿಸಿದೆ.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುದೇಶ್ ಕುಮಾರ್ ಹೊಸದಾಗಿ  ಸಮನ್ಸ್‌ಗಳನ್ನು ಜಾರಿಗೊಳಿಸಲು ಸೂಚಿಸಿದ್ದು, ಅವನ್ನು ವಿದೇಶಾಂಗ ವ್ಯವಹಾರ ಸಚಿವಾಲಯದ ಮೂಲಕ ಸಂಬಂಧಿಸಿದವರಿಗೆ ಕಳುಹಿಸಲಾಗುತ್ತದೆ.

ಆಕ್ಷೇಪಾರ್ಹ ಸಂಗತಿಗಳನ್ನು ಜಾಲಕ್ಕೆ ಹಾಕಿದ್ದ ಈ ಕಂಪೆನಿಗಳನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಸಂದರ್ಭದಲ್ಲೇ  ಸೂಚನೆ ಹೊರಬಿದ್ದಿದೆ.

ADVERTISEMENT

ಭಾರತೀಯ ದಂಡ ಸಂಹಿತೆಯ ಕಲಂ 153ಎ (ಧರ್ಮದ ಆಧಾರದಲ್ಲಿ ವಿವಿಧ ಜನಸಮೂಹಗಳ ಮಧ್ಯೆ ದ್ವೇಷಭಾವ ಮೂಡಿಸುವ ಯತ್ನ), 153 ಬಿ (ರಾಷ್ಟ್ರೀಯ ಏಕತೆಯ ಕುರಿತು ಪೂರ್ವಗ್ರಹ ಪೀಡಿತವಾಗಿ ಆಪಾದನೆ ಹೊರಿಸುವುದು) ಮತ್ತು 295 ಎ ಅಡಿ  (ದುರುದ್ದೇಶಪೂರ್ವಕ ಹಗೆತನ) ಈ ಕಂಪೆನಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಒಪ್ಪಿಗೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆ ವಿಚಾರಣೆ ವೇಳೆ ಸ್ಪಷ್ಟಪಡಿಸಿತು.
ವಿನಯ್ ರೈ ಎಂಬುವವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರಿನಲ್ಲಿ ಮೈಕ್ರೋಸಾಫ್ಟ್, ಗೂಗಲ್, ಯುಟ್ಯೂಬ್, ಯಾಹೂ ಸೇರಿದಂತೆ 21 ಕಂಪೆನಿಗಳನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ. ಅಪರಾಧ ಸಂಚು, ಮಾನಹಾನಿ ಹಾಗೂ ಧರ್ಮದ ಹೆಸರಿನಲ್ಲಿ ವಿವಿಧ ಜನಸಮೂಹಗಳ ಮಧ್ಯೆ ದ್ವೇಷ ಬಿತ್ತಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದರು.

ಅಂತರಜಾಲದಲ್ಲಿನ ಕೆಲವು ಚಿತ್ರಗಳು, ಮಾಹಿತಿಗಳ ಬಗ್ಗೆ ಸಂವಹನ ಖಾತೆ ಸಚಿವ ಕಪಿಲ್ ಸಿಬಲ್ ಕಳೆದ ತಿಂಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಹ ಮಾಹಿತಿಯನ್ನು ಅಂತರಜಾಲಕ್ಕೆ ಹಾಕುವುದಕ್ಕೆ ಮುಂಚಿತವಾಗಿಯೇ ನೋಡಿ ಅವುಗಳ ಉದ್ದೇಶವನ್ನು ಖಾತ್ರಿಗೊಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದ ಅವರು, ಪ್ರಸ್ತುತ ಜಾಲದಲ್ಲಿ ಹಾಕಲಾಗಿರುವ ಕೆಲವು ಸಂಗತಿಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದ್ದರು.

ಇದೇ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ 16ಕ್ಕೆ ಮುಂದೂಡಿರುವುದರಿಂದ ವಿಚಾರಣೆಯನ್ನು ಮುಂದೂಡುವಂತೆ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರ ಮನವಿ ಮಾಡಿದರು. ಕಂಪೆನಿಗಳ ಪರವಾಗಿ ಹಾಜರಿದ್ದ ವಕೀಲರು ಕೂಡ ವಿಚಾರಣೆ ಮುಂದೂಡಿಕೆ ಕೋರಿದರು.

ಇದಕ್ಕೆ ಮುನ್ನ ದೆಹಲಿ ಹೈಕೋರ್ಟ್ ಗುರುವಾರ, ಆಕ್ಷೇಪಾರ್ಹ ವಿಷಯಗಳನ್ನು ತೆಗೆಯದಿದ್ದರೆ ಸರ್ಚ್ ಎಂಜಿನಿಗಳು ಹಾಗೂ ಸಾಮಾಜಿಕ ಜಾಲ ತಾಣಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ಅಧೀನ ನ್ಯಾಯಾಲಯ ಡಿ.23ರಂದು ಸಮನ್ಸ್ ಹೊರಡಿದ್ದನ್ನು ಪ್ರಶ್ನಿಸಿ ಕಂಪೆನಿಗಳ ತಂಡ ಮೇಲ್ಮನವಿ ಸಲ್ಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.