ADVERTISEMENT

ಸಾಮೂಹಿಕ ಅತ್ಯಾಚಾರ: ಸಂಸತ್ತಿನಲ್ಲಿ ಪ್ರತಿಧ್ವನಿ, ಕೋಲಾಹಲ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:43 IST
Last Updated 18 ಡಿಸೆಂಬರ್ 2012, 10:43 IST

ನವದೆಹಲಿ (ಪಿಟಿಐ): ರಾಜಧಾನಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ಮಂಗಳವಾರ ಸಂಸತ್ತಿನಲ್ಲಿ ಪ್ರತಿಧ್ವನಿಸಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ತತ್ ಕ್ಷಣ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಪ್ರಶ್ನೋತ್ತರ ಕಲಾಪವನ್ನು ಸ್ಥಗಿತಗೊಳಿಸಿದರು.

ಲೋಕಸಭೆಯಲ್ಲಿ ಶಾನವಾಜ್ ಹುಸೇನ್ ನೇತೃತ್ವದಲ್ಲಿ ಸದಸ್ಯರು ವಿಷಯವನ್ನು ಪ್ರಸ್ತಾಪಿಸಿ ಪ್ರಶ್ನೋತ್ತರವ ಕಲಾಪ ಅಮಾನತುಗೊಳಿಸುವಂತೆ ಆಗ್ರಹಿಸಿದರು.

ಆದರೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡುವುದಾಗಿ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಭರವಸೆ ನೀಡಿದ್ದನ್ನು ಅನುಸರಿಸಿ ಸದಸ್ಯರು ತಮ್ಮ ಪೀಠಗಳಿಗೆ ವಾಪಸಾದರು.

'ಇದು ಗಂಭೀರ ವಿಷಯ. ಹೇಯ ಕೃತ್ಯ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ನಿಮಗೆ ಅವಕಾಶ ನೀಡುವೆ' ಎಂದು ಮೀರಾ ಕುಮಾರ್ ಹೇಳಿದರು.

ರಾಜ್ಯಸಭೆಯಲ್ಲಿ ಸಭಾಪತಿ ಹಮೀದ್ ಅನ್ಸಾರಿ ಅವರು ಫಿಲಿಪ್ಪೀನ್ಸ್ ನಲ್ಲಿ ಚಂಡಮಾರುತದಲ್ಲಿ ಮೃತರಾದ 1000 ಮಂದಿಗೆ ಶೋಕ ವ್ಯಕ್ತ ಪಡಿಸಿದ ಬೆನ್ನಲ್ಲೇ ವಿರೋಧ ಪಕ್ಷಗಳ ಬಹುತೇಕ ಎಲ್ಲ ಸದಸ್ಯರೂ ಅತ್ಯಾಚಾರದ ಮತ್ತು ದೆಹಲಿಯ ಕಾನೂನು ಸುವ್ಯವಸ್ಥೆ ವಿಚಾರ  ಪ್ರಸ್ತಾಪಿಸಲು ಎದ್ದು ನಿಂತರು.

ಅಪರಾಧ ಕೃತ್ಯದ ಬಗ್ಗೆ ಚರ್ಚಿಸುವ ಸಲುವಾಗಿ ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಲು ತಮ್ಮ ಪಕ್ಷ ನೋಟಿಸ್ ನೀಡಿದೆ ಎಂದು ಬಿಜೆಪಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಸಂಕ್ಷಿಪ್ತ ಹೇಳಿಕೆ ನೀಡಲು ಮಾಯಾ ಸಿಂಗ್ (ಬಿಜೆಪಿ) ಅವರಿಗೆ ಅವಕಾಶ ನೀಡಲಾಗಿದೆ ಎಂದು ಅನ್ಸಾರಿ ಉತ್ತರಿಸಿದರು.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಮಾಯಾ ಸಿಂಗ್ 'ಭಾನುವಾರದ ಅತ್ಯಾಚಾರ ಘಟನೆ ಎಲ್ಲ ಮಿತಿಗಳನ್ನೂ ಮೀರಿದೆ ಮತ್ತು ರಾಷ್ಟ್ರದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಗೃಹ ಸಚಿವರ ತತ್ ಕ್ಷಣವೇ ಸದನಕ್ಕೆ ಬಂದು ಹೇಳಿಕೆ ನೀಡಬೇಕು' ಎಂದು ಆಗ್ರಹಿಸಿದರು.

ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ ಶುಕ್ಲ ಅವರು ಹೇಳಿಕೆ ನೀಡಲು ಎದ್ದು ನಿಂತರು. ಆದರೆ ಅವರಿಗೆ ಮಾತನಾಡಲು ಅವಕಾಶ ನೀಡದ ಸದಸ್ಯರು ಗೃಹ ಸಚಿವರೇ ಸದನಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

'ವಿಷಯದ ಬಗ್ಗೆ ನಮಗೆಲ್ಲರಿಗೂ ನೋವಾಗಿದೆ. ಬೆಳಗಿನ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿತ್ತು ಮತ್ತು ಮಧ್ಯಾಹ್ನ ವಿಷಯವನ್ನು ಎತ್ತಿಕೊಳ್ಳಬೇಕು ಎಂದು ನಿರ್ಧಾರವಾಗಿತ್ತು' ಎಂದು ಅನ್ಸಾರಿ ನುಡಿದರು.

ಆದರೂ ಕೋಲಾಹಲ ನಿಲ್ಲದೇ ಹೋದಾಗ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು. ಸದನ ಸಮಾವೇಶಗೊಂಡಾಗ ವಿಷಯವನ್ನು ಮಧ್ಯಾಹ್ನ ಎತ್ತಿಕೊಳ್ಳಲಾಗುವುದು. ಸರ್ಕಾರ ಹೇಳಿಕೆ ನೀಡುವುದು ಎಂದು ಅನ್ಸಾರಿ ಹೇಳಿದರು.

ಇದು ಸದಸ್ಯರಿಗೆ ಸಮಾಧಾನ ನೀಡಲಿಲ್ಲ. ಶಿಂಧೆ ಅವರು ತತ್ ಕ್ಷಣವೇ ಸದನಕ್ಕೆ ಆಗಮಿಸಿ ಹೇಳಿಕೆ ನೀಡಬೇಕು ಎಂದು ವಿರೋಧಿ ಸದಸ್ಯರು ಆಗ್ರಹಿಸಿದರು.

'ಗೃಹ ಸಚಿವರಿಗೆ ಸಂದೇಶ ನೀಡಲಾಗಿದೆ. ಪ್ರಶ್ನೋತ್ತರ ವೇಳೆಯ ಬಳಿಕ ಸಚಿವರು ಸದನಕ್ಕೆ ಆಗಮಿಸಿ ಹೇಳಿಕೆ ನೀಡುವರು' ಎಂದು ಹೇಳಿ ಪ್ರಶ್ನೋತ್ತರ ಕಲಾಪ ಆರಂಭಿಸಲು ಸಭಾಪತಿಯವರು ಉದ್ಯುಕ್ತರಾಗುತ್ತಿದ್ದಂತೆಯೇ ಎದ್ದು ನಿಂತ ಜಯಾ ಬಚ್ಚನ್ (ಎಸ್ ಪಿ) 'ರಾಜಕೀಯ ವಿಚಾರಗಳಿಗಾಗಿ ಪ್ರಶ್ನೋತ್ತರ ಕಲಾಪವನ್ನು ರದ್ದು ಪಡಿಸಬಹುದಾಗಿದ್ದರೆ, ಮಹಿಳೆಯರ ಸುರಕ್ಷತೆ ವಿಚಾರ ಚರ್ಚಿಸಲು ಪ್ರಶ್ನೋತ್ತರ ಕಲಾಪವನ್ನು ಏಕೆ ರದ್ದುಗೊಳಿಸಲು ಸಾಧ್ಯವಿಲ್ಲ?' ಎಂದು ಪ್ರಶ್ನಿಸಿದರು.

'ನಾನು ಸದನದಲ್ಲಿ ನಿಂತುಕೊಂಡೇ ಪ್ರತಿಭಟಿಸುತ್ತೇನೆ' ಎಂದು ಹೇಳಿ ಅವರು ಎದ್ದು ನಿಂತುಕೊಂಡರು. ಇತರ ಮಹಿಳಾ ಸದಸ್ಯರೂ ಅವರ ಜೊತೆಗೂಡಿ ಸದನದಲ್ಲಿ ಎದ್ದು ನಿಂತುಕೊಂಡರು.

'ನಗರದ ಕುಖ್ಯಾತ ಕ್ರಿಮಿನಲ್ ಹಾಲಿ ಪೊಲೀಸ್ ಕಮೀಷನರ್ ಅವರನ್ನು ಕಿತ್ತು ಹಾಕದೇ ಇದ್ದರೆ ರಾಜಧಾನಿಯಲ್ಲಿ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಗೃಹ ಸಚಿವರಿಗೆ ರವಾನಿಸಲು ನಾನಉ ಬಯಸುವೆ' ಎಂದು ರಾಮ್ ಜೇಠ್ಮಲಾನಿ (ಬಿಜೆಪಿ) ನುಡಿದರು.

ಗದ್ದಲದ ಮಧ್ಯೆ ಅನ್ಸಾರಿ ಅವರು ಪುನಃ ಸದನವನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.