ADVERTISEMENT

ಸಾವಿತ್ರಿ ನದಿಯಲ್ಲಿ ಕೊಚ್ಚಿಹೋದ 22 ಜನ

ಮುಂಬೈ–ಗೋವಾ ಹೆದ್ದಾರಿಯಲ್ಲಿ ದುರಂತ * ಬ್ರಿಟಿಷರ ಕಾಲದ ಸೇತುವೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 19:30 IST
Last Updated 3 ಆಗಸ್ಟ್ 2016, 19:30 IST
ಸಾವಿತ್ರಿ ನದಿಯಲ್ಲಿ ಮುಳುಗಿ ಸತ್ತಿರುವ ಪ್ರಯಾಣಿಕರ ಶವಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರು ಮೇಲಕ್ಕೆತ್ತಿರುವುದು –ಎಎಫ್‌ಪಿ ಚಿತ್ರ
ಸಾವಿತ್ರಿ ನದಿಯಲ್ಲಿ ಮುಳುಗಿ ಸತ್ತಿರುವ ಪ್ರಯಾಣಿಕರ ಶವಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರು ಮೇಲಕ್ಕೆತ್ತಿರುವುದು –ಎಎಫ್‌ಪಿ ಚಿತ್ರ   

ಮಹಾಡ್, ಮಹಾರಾಷ್ಟ್ರ (ಪಿಟಿಐ): ಭಾರಿ ಮಳೆ ಮತ್ತು ಪ್ರವಾಹದಿಂದ  ಮುಂಬೈ–ಗೋವಾ ಹೆದ್ದಾರಿಯಲ್ಲಿ ಇರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸಾವಿತ್ರಿ ನದಿಯ ಸೇತುವೆಯು ಕುಸಿದಿರುವುದರಿಂದ ಎರಡು ಬಸ್ಸುಗಳು ಕೊಚ್ಚಿಹೋಗಿದ್ದು, 22 ಜನರು ನಾಪತ್ತೆಯಾಗಿದ್ದಾರೆ. ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ.

ರಾಯಗಡ ಜಿಲ್ಲೆಯ ಮಹಾಡ್ ಬಳಿ ಮಂಗಳವಾರ ರಾತ್ರಿ 11.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ರಕ್ಷಣಾ ತಂಡವು ಇಬ್ಬರು ಪುರುಷರ ಶವಗಳನ್ನು ಪತ್ತೆ ಮಾಡಿದ್ದು, ಕಾಣೆಯಾದವರ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ರಾಯಗಡ ಜಿಲ್ಲಾಧಿಕಾರಿ ಶೀತಲ್ ಉಗಳೆ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕರಾವಳಿ ಕಾವಲು ಪಡೆ, ಅಗ್ನಿ ಶಾಮಕ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳು 18 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸಹಿತ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್  ಟ್ವೀಟ್ ಮಾಡಿದ್ದಾರೆ.

ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡಲಾಗಿ ಎರಡು ಸಮಾನಾಂತರ ಸೇತುವೆಗಳು ಇವೆ. ಒಂದು ಹೊಸತು. ಇನ್ನೊಂದು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು ಎಂದು ಫಡಣವೀಸ್ ತಿಳಿಸಿದ್ದಾರೆ. ಮಹಾಬಲೇಶ್ವರ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ಒಮ್ಮೆಲೆ ಪ್ರವಾಹ ಹೆಚ್ಚಿ ಉಂಟಾದ ಒತ್ತಡಕ್ಕೆ ಹಳೆಯ ಸೇತುವೆ ಕುಸಿದಿರಬಹುದು ಎಂದು ಅವರು ಹೇಳಿದ್ದಾರೆ.

ರಾಯಗಡ ಜಿಲ್ಲಾಧಿಕಾರಿ ಮತ್ಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮುಂಬೈ– ಗೋವಾ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿ ಹೊಸ ಸೇತುವೆಯ ಸಾಮರ್ಥ್ಯವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸೇತುವೆ ಕುಸಿದಿರುವ ಬಗ್ಗೆ ಪ್ರಧಾನಿ ಮೋದಿ ಅವರು ಫಡಣವೀಸ್ ಜತೆ ಮಾತನಾಡಿ ವಿವರ ಪಡೆದಿದ್ದಾರೆ ಮತ್ತು ಕೇಂದ್ರದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ.

ಕರಾವಳಿ ಕಾವಲು ಪಡೆ ಚೇತಕ್ ಹೆಲಿಕಾಪ್ಟರ್ ಮೂಲಕ ಪ್ರಯಾಣಿಕರ ಪತ್ತೆಗೆ ಪ್ರಯತ್ನಿಸುತ್ತಿದೆ.  ಸರ್ವ ಋತುವಿನಲ್ಲಿ ಕಾರ್ಯಾಚರಣೆ ಸಾಮರ್ಥ್ಯ ಹೊಂದಿದ 42ಸಿ ಹೆಲಿಕಾಪ್ಟರ್‌ ಮತ್ತು  ಆಮ್ಲಜನಕ ಮಾಸ್ಕ್  ಧರಿಸಿ 10 ಮೀಟರ್ ಆಳಕ್ಕಿಳಿದು ಶೋಧ ನಡೆಸುವ ಸಾಮರ್ಥ್ಯವಿರುವ ಮುಳುಗು ತಜ್ಞರನ್ನು ರಕ್ಷಣಾ ಕಾರ್ಯಕ್ಕೆ ಬಳಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಆರಂಭದಲ್ಲಿ ರಕ್ಷಣಾ ತಂಡ ಕುಸಿದ ಸೇತುವೆ ಬಳಿ 100ರಿಂದ 200 ಮೀಟರ್‌ವರಗೆ ಶೋಧ ನಡೆಸುತ್ತಿದ್ದು, ಶೋಧ ಪ್ರದೇಶವನ್ನು ವಿಸ್ತರಿಸಲಾಗುತ್ತದೆ ಎಂದಿದ್ದಾರೆ. ರಕ್ಷಣಾ ಕಾರ್ಯದಲ್ಲಿ ರಾಜ್ಯ ಸರ್ಕಾರಕ್ಕೆ ಅಗತ್ಯ ನೆರವು ನೀಡಬೇಕು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಅಪಘಾತ ಪರಿಹಾರ ವೈದ್ಯಕೀಯ ವಾಹನ ಮತ್ತು ರೈಲು, ವೈದ್ಯರು ಹಾಗೂ ಪರಿಹಾರ ಕಾರ್ಯಕ್ಕೆ ಸಿಬ್ಬಂದಿಯನ್ನು ಒದಗಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿದ್ದೇಶ್ವರ ತೆಲುಗು ತಿಳಿಸಿದ್ದಾರೆ.

ರಾತ್ರಿ ಸೇತುವೆ ಕುಸಿದು ಬಸ್ ಕೊಚ್ಚಿಹೋದ ಸುದ್ದಿ ಗೊತ್ತಾದ ಕೂಡಲೇ  ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳು ತ್ತಿದ್ದಾರೆ. ಬುಧವಾರ ಇಡೀ ದಿನ ಕಾರ್ಯಾಚರಣೆ ನಡೆಸಿ ರಾತ್ರಿ ಸ್ಥಗಿತಗೊಳಿಸಲಾಗಿದೆ.

ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಗೋದಾವರಿ
ನಾಸಿಕ್ ವರದಿ: ಕಳೆದ ನಾಲ್ಕು ದಿನಗಳಿಂದ ನಾಸಿಕ್, ಔರಂಗಾಬಾದ್, ಅಹಮದ್‌ನಗರ ಮತ್ತು ಪುಣೆಯಲ್ಲಿ ಸತತ ಮಳೆ ಆಗುತ್ತಿರುವುದರಿಂದ ಗೋದಾವರಿ ಮತ್ತು ಅದರ ಉಪ ನದಿಗಳು  ಉಕ್ಕಿ ಹರಿಯುತ್ತಿದ್ದು, ನದಿ ತೀರದ ದತ್ತಾ, ಬಾಲಾಜಿ, ಮಾರುತಿ ಮತ್ತು ಖಂಡೇರಾಯ  ದೇವಸ್ಥಾನಗಳು ಜಲಾವೃತ ಗೊಂಡಿವೆ.

ಮಳೆಯಿಂದ ಆಗಿರುವ ಅನಾಹುತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಜಲಾವೃತಗೊಂಡಿರುವ ಎರಡು ಹಳ್ಳಿಗಳ ಸುಮಾರು ನೂರು ಜನರನ್ನು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.

ಗೋದಾವರಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಉಪ ನದಿಗಳಾದ ದರನಾ, ಕಡ್ವಾ ಮತ್ತು ಇತರ ಸಣ್ಣಪುಟ್ಟ ನದಿಗಳು ಸಹ ಉಕ್ಕಿ ಹರಿಯುತ್ತಿವೆ. ಗೋದವಾರಿ ನದಿಯ ಗಂಗಾಪುರ ಅಣೆಕಟ್ಟು, ದರನಾ, ಪಲ್ಕೇಡ್, ಕಡ್ವಾ ಮತ್ತು ವಾಲ್ದೇವಿ ಅಣೆಕಟ್ಟೆಗಳಿಂದ ನೀರನ್ನು ಹೊರಬಿಡಲಾಗಿದೆ.

ನಾಸಿಕ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೋಳ್ಕರ್ ಸೇತುವೆನ್ನು ಮುಚ್ಚಲಾಗಿದೆ. ಖಡಕವಾಸ್ಲಾ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ಮುತಾ ನದಿ ಉಕ್ಕಿ ಹರಿಯುತ್ತಿದೆ. ರಸ್ತೆಗಳ ಮೇಲೆ ನೀರು ತುಂಬಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಔರಂಗಾಬಾದ್ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ 12 ಹಳ್ಳಿಗಳು ಜಲಾವೃತಗೊಂಡಿವೆ. 200 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಮುಂಬೈ–ಅಹಮದ್‌ ನಗರ ಮತ್ತು ಪುಣೆಗೆ ಸಂಪರ್ಕ ಕಲ್ಪಿಸುವ ಮಲ್‌ಶೆಜ್ ಘಟ್ಟದಲ್ಲಿ ಭಾರಿ ಮಳೆ ಅಗುತ್ತಿರುವುದರಿಂದ ಕೆಲವು ಕಡೆ ಭೂ ಕುಸಿತ ಉಂಟಾಗಿದೆ.

3 ಕಾರುಗಳು ನದಿಪಾಲು?: ಎರಡು ಬಸ್ಸುಗಳಲ್ಲದೆ ಮೂರು ಕಾರುಗಳು, ಒಂದು ಎಸ್‌ಯುವಿ ವಾಹನ ಸಹ ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎಂದು ಹೇಳಲಾಗುತ್ತಿದ್ದರೂ, ಜಿಲ್ಲಾ ಆಡಳಿತ ಇದನ್ನು ದೃಢಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT