ADVERTISEMENT

ಸಿಂಗಪುರ ಆಸ್ಪತ್ರೆಗೆ ಯುವತಿ

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: 3 ತಿಂಗಳಲ್ಲಿ ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 20:29 IST
Last Updated 26 ಡಿಸೆಂಬರ್ 2012, 20:29 IST

ನವದೆಹಲಿ (ಪಿಟಿಐ): ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕಳೆದ ಹತ್ತು ದಿನಗಳಿಂದ ಇಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ 23 ವರ್ಷದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ರಾತ್ರಿ ಸಿಂಗಪುರದ ಸುಸಜ್ಜಿತ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಜೀವರಕ್ಷಕ ಅಳವಡಿಸಲಾಗಿರುವ ಯುವತಿಯನ್ನು ಸುಸಜ್ಜಿತ ವಿಶೇಷ ಏರ್ ಅಂಬುಲೆನ್ಸ್‌ನಲ್ಲಿ ರಾತ್ರಿ 11-45ರ ಹೊತ್ತಿಗೆ ಸಿಂಗಪುರದ ಮೌಂಟ್ ಎಲಿಜೆಬೆತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿಂಗಪುರ ತಲುಪಲು ಐದೂವರೆ ಗಂಟೆಗಳ ಅವಧಿ ಬೇಕಾಗುತ್ತದೆ. ಯುವತಿ ಜತೆಗೆ ಆಸ್ಪತ್ರೆ ವೈದ್ಯರು, ಆಕೆಯ ಕುಟುಂಬದ ಕೆಲ ಸದಸ್ಯರೂ ಸಿಂಗಪುರಕ್ಕೆ ತೆರಳಿದ್ದು ಅವರಿಗೆ ಅಗತ್ಯವಾದ ಪಾಸ್‌ಪೋರ್ಟ್ ಮತ್ತಿತರ ವ್ಯವಸ್ಥೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತುರ್ತು ನೆಲೆಯಲ್ಲಿ ಒದಗಿಸಿದೆ.

ಕಳೆದ 16ರಿಂದ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿಗೆ ಈಗಾಗಲೆ ಎರಡು ಬಾರಿ ದೊಡ್ಡ ಹಾಗೂ ಒಂದು ಬಾರಿ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿದ್ದರೂ ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ ಆಕೆಗೆ ವಿಶೇಷ ಚಿಕಿತ್ಸೆ ನೀಡಲು ವಿದೇಶದ ಆಸ್ಪತ್ರೆಗೆ ಸ್ಥಳಾಂತರಿಸುವ ನಿರ್ಧಾರವನ್ನು ಆಸ್ಪತ್ರೆ ವೈದ್ಯರೇ ಕೈಗೊಂಡರು ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿದ್ದ ಈ 10ದಿನಗಳಲ್ಲಿ 2 ದಿನ ಮಾತ್ರ ಆಕೆಗೆ ಅಳವಡಿಸಲಾಗಿದ್ದ ಜೀವರಕ್ಷಕ ತೆಗೆಯಲಾಗಿತ್ತು.

ಸಿಂಗಪುರದ ಈ ಆಸ್ಪತ್ರೆ ಅಂಗ ಕಸಿಗೆ ಪ್ರಸಿದ್ಧವಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಯುವತಿಯ ಹೊಟ್ಟೆ ಹಾಗೂ ಕರುಳುಗಳಿಗೆ ತೀವ್ರ ಹಾನಿಯಾಗಿರುವುದರಿಂದ ಈ ಆಸ್ಪತ್ರೆಯಲ್ಲಿ ಆಕೆಗೆ ದೀರ್ಘಕಾಲಿನ ಚಿಕಿತ್ಸೆ ಅಗತ್ಯವಾಗಬಹುದು ಎಂದು ಸಫ್ದರ್‌ಜಂಗ್ ಆಸ್ಪತ್ರೆ ಅಧೀಕ್ಷಕ ಡಾ. ಬಿ.ಡಿ. ಅಥಣಿ ತಿಳಿಸಿದರು. ಸಿಂಗಪುರ ಆಸ್ಪತ್ರೆಯ ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಭಾರತ ಸರ್ಕಾರವೇ ಭರಿಸಲಿದೆ.  

ತನಿಖಾ ಆಯೋಗ ರಚನೆ
ನವದೆಹಲಿ: ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ, ಹೊಣೆಗಾರಿಕೆ ನಿಗದಿಪಡಿಸಲು ಕೇಂದ್ರ ಸರ್ಕಾರ ಬುಧವಾರ ಮತ್ತೊಂದು ಏಕ ಸದಸ್ಯ ತನಿಖಾ ಆಯೋಗ ನೇಮಿಸಿತು.

`ಸಾಮೂಹಿಕ ಅತ್ಯಾಚಾರ ಪ್ರಕರಣ' ಕುರಿತು ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ ವಿಚಾರಣೆ ನಡೆಸಲಿದ್ದು, ದೆಹಲಿಯಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ಕುರಿತು ಸೂಕ್ತ ಸಲಹೆಗಳನ್ನು ನೀಡಲಿದೆ. ಆಯೋಗ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ. ಈ ವರದಿ ಮತ್ತು ಅದರ ಮೇಲೆ ಕೈಗೊಂಡಿರುವ ಕ್ರಮದ ವರದಿಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಲಿದೆ.

ಏಕ ಸದಸ್ಯೆ ಆಯೋಗವು, ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾ ನೇತೃತ್ವದಲ್ಲಿ ಈಗಾಗಲೇ ರಚಿಸಲಾಗಿರುವ ತ್ರಿಸದಸ್ಯ ಸಮಿತಿಗೆ ಹೊರತಾಗಿರುತ್ತದೆ. ವರ್ಮಾ ಸಮಿತಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಲು ಅನುಕೂಲವಾಗುವಂತೆ ಈಗಿರುವ ಕಾನೂನಿಗೆ ಅಗತ್ಯ ತಿದ್ದುಪಡಿಗಳನ್ನು ಶಿಫಾರಸು ಮಾಡಲಿದೆ.

ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಅತ್ಯಾಚಾರ ಪ್ರಕರಣ ಮತ್ತು ಅನಂತರ ನಡೆದ ಪ್ರತಿಭಟನೆ ಕುರಿತು ಮಾಹಿತಿ ನೀಡಿದರು. ಘಟನೆ ಕುರಿತು ಸಭೆಯಲ್ಲಿದ್ದ ಸಚಿವರು ಕಳವಳ ವ್ಯಕ್ತಪಡಿಸಿದರು. ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಯುವತಿ ಚೇತರಿಕೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳೆಯರ ಮನಸ್ಸಿನಲ್ಲಿರುವ ಆತಂಕ ನಿವಾರಿಸಿ, ಸುರಕ್ಷತೆ ಭಾವನೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಹಾಕಬೇಕೆಂದರು.

ವಿಚಾರಣಾ ಆಯೋಗದ ನೇಮಕ ಪ್ರಕಟಿಸಿದ ಹಣಕಾಸು ಸಚಿವ ಪಿ. ಚಿದಂಬರಂ ಎಲ್ಲ ಮಹಾನಗರಗಳಲ್ಲೂ ತಲೆನೋವಾಗಿರುವ ಅತ್ಯಾಚಾರ ಪಿಡುಗಿಗೆ ವಿರಾಮ ಹಾಕಲು ಸರ್ಕಾರ ಪ್ರಯತ್ನ ಆರಂಭಿಸಿದೆ ಎಂದರು.

ನಾಚಿಕೆಪಟ್ಟುಕೊಳ್ಳಬೇಕು: `ಸಾಮೂಹಿಕ ಅತ್ಯಾಚಾರ ಪ್ರಕರಣ ನಾಚಿಕೆಗೇಡಿನ ಸಂಗತಿ. ಇದು ದೆಹಲಿಯಲ್ಲಿ ನಡೆದಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ಈ ಪ್ರಕರಣದ ಬಗ್ಗೆ ಮನುಷ್ಯನಾಗಿ ನಾನು ನಾಚಿಕೆಪಟ್ಟುಕೊಳ್ಳುತ್ತೇನೆ.

ADVERTISEMENT

ನೀವೂ ನಾಚಿಕೆಪಟ್ಟುಕೊಳ್ಳಬೇಕು. ಮನುಷ್ಯರು ಈ ರೀತಿ ಏಕೆ ವರ್ತಿಸಬೇಕು?' ಎಂದು ಪತ್ರಿಕಾಗೋಷ್ಠಿಯಲ್ಲಿ ಖಾರವಾಗಿ ಕೇಳಿದರು. `ಡಿಸೆಂಬರ್ 16ರಂದು ನಡೆದ ಘಟನೆಯಿಂದ ಬೇಸರವಾಗಿದೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸುತ್ತೇನೆ' ಎಂದು ಚಿದಂಬರಂ ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ ಜತೆಗೂಡಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ವಿಚಾರಣಾ ಆಯೋಗ ಹಾಗೂ ವರ್ಮಾ ಸಮಿತಿ ನೇಮಕ ಕುರಿತು ಪ್ರಸ್ತಾಪಿಸಿದ ಹಣಕಾಸು ಸಚಿವರು, `ಮಹಿಳೆಯರ ಸುರಕ್ಷತೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು. ದೊಡ್ಡ ಸಂಖ್ಯೆಯಲ್ಲಿ ಅತ್ಯಾಚಾರ ಪ್ರಕರಣ ಇತ್ಯರ್ಥವಾಗದೆ ಉಳಿದಿದ್ದು, ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುರುಗೇಶನ್ ಒಳ್ಳೆಯ ಕೆಲಸ ಮಾಡಿದ್ದಾರೆ. ಉಳಿದ ಹೈಕೋರ್ಟ್‌ಗಳು ಇದನ್ನು ಅನುಸರಿಸಬೇಕು ಎಂದು ಚಿದಂಬರಂ ಸಲಹೆ ಮಾಡಿದರು.

`ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರದ ಬೆಳವಣಿಗೆ ನಿಭಾಯಿಸಲು ಸರ್ಕಾರ ವಿಫಲವಾಯಿತು' ಎಂಬ ವಾದವನ್ನು ಚಿದಂಬರಂ ಹಾಗೂ ಮನೀಷ್ ತಿವಾರಿ ಒಪ್ಪಲಿಲ್ಲ. `ಇದೊಂದು ಹೊಸ ಬೆಳವಣಿಗೆ ಆಗಿದ್ದು, ಹಠಾತ್ತನೇ ಪ್ರತ್ಯಕ್ಷರಾದ ಕೆಲವರು ಹಿಂಸಾಚಾರದಲ್ಲಿ ತೊಡಗಿದರು' ಎಂದು ಚಿದಂಬರಂ ವಿವರಿಸಿದರು. `ಹೋರಾಟ ಅಹಿಂಸಾತ್ಮಕವಾಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ' ಎಂದು ಮನೀಷ್ ತಿವಾರಿ ನುಡಿದರು.+

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನು ತಿದ್ದುಪಡಿಗಳು ಹಳೆ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು.

ದೀಕ್ಷಿತ್ ಆರೋಪ ವಿಚಾರಣೆ: ಅತ್ಯಾಚಾರಕ್ಕೊಳಗಾದ ಯುವತಿ ಹೇಳಿಕೆ ದಾಖಲಿಸುವ ಸಮಯದಲ್ಲಿ ದೆಹಲಿ ಪೊಲೀಸರು ಹಸ್ತಕ್ಷೇಪ ಮಾಡಿದ್ದಾರೆಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮಾಡಿರುವ ಆರೋಪ ಕುರಿತು ಹಿರಿಯ ಅಧಿಕಾರಿಯೊಬ್ಬರಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವರು ಸಂಪುಟ ಸಭೆಗೆ ತಿಳಿಸಿದ್ದಾರೆಂದು ಚಿದಂಬರಂ ಹೇಳಿದರು.

ಶೀಲಾ ದೀಕ್ಷಿತ್ ಹಾಗೂ ಪೊಲೀಸ್ ಕಮಿಷನರ್ ನಡುವಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಲು ಮಾಜಿ ಗೃಹ ಸಚಿವರು ನಿರಾಕರಿಸಿದರು.

`ವಿಚಾರಣಾ ಸಮಿತಿ ವರದಿ ಬರುವವರೆಗೂ ಕಾಯೋಣ' ಎಂದು ತಿಳಿಸಿದರು.ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಹೊರ ದೇಶಕ್ಕೆ ಒಯ್ಯಲಾಗುವುದೇ ಎಂಬ ಪ್ರಶ್ನೆಗೆ, ಆಕೆ ಆಸ್ಪತ್ರೆಯಿಂದ ಕದಲುವ ಸ್ಥಿತಿಯಲ್ಲಿ ಇಲ್ಲ. ಆದರೆ, ಎಲ್ಲವೂ ವೈದ್ಯರನ್ನು ಅವಲಂಬಿಸಿದೆ ಎಂದರು.

ತೋಮರ್ ಸಾವು: ಶಂಕೆ ನಿವಾರಣೆ
ನವದೆಹಲಿ (ಪಿಟಿಐ): `ಕಾನ್‌ಸ್ಟೇಬಲ್ ಸುಭಾಷ್ ಚಂದ್ರ ತೋಮರ್ ತೀವ್ರವಾಗಿ ಗಾಯಗೊಂಡ ಪರಿಣಾಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ' ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದ್ದು, ಈ ಪ್ರಕರಣದ ಸುತ್ತ ಎದ್ದ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ.

ತೋಮರ್ ಸಾವಿನ ಕುರಿತ ತಮ್ಮ ಹೇಳಿಕೆಯು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾಬೀತಾಗಿರುವುದಕ್ಕೆ ದೆಹಲಿ ಪೊಲೀಸರು ನಿರಾಳಗೊಂಡಿದ್ದಾರೆ.

ಪೊಲೀಸರ ಹೇಳಿಕೆಗೆ ವೈದ್ಯರು ಹಾಗೂ ಪ್ರತ್ಯಕ್ಷದರ್ಶಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದ ಕಾರಣ ಈ ಪ್ರಕರಣದ ಸುತ್ತ ಅನುಮಾನದ ಹೊಗೆ ಎದ್ದಿತ್ತು.


`ಪ್ರತಿಭಟನೆ ವೇಳೆ ತೋಮರ್ ಮೇಲೆ ಹಲ್ಲೆ ನಡೆದಿಲ್ಲ. ಅವರು ಕುಸಿದು ಬಿದ್ದಿದ್ದರು' ಎಂದು ಪತ್ರಿಕೋದ್ಯಮ ವಿದ್ಯಾರ್ಥಿ ಯೋಗೇಂದ್ರ ಹೇಳಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ನಂತರದಲ್ಲಿ ಇದಕ್ಕೆ ಪುಷ್ಟಿ ನೀಡುವಂತೆ ರಾಮ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಟಿ.ಎಸ್. ಸಿಧು ಕೂಡ `ತೋಮರ್ ಅವರಿಗೆ ಗಂಭೀರವಾದ ಗಾಯ ಆಗಿರಲಿಲ್ಲ' ಎಂದು ಹೇಳಿಕೆ ನೀಡಿದ್ದರು.

ವ್ಯತಿರಿಕ್ತ ಹೇಳಿಕೆಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ.

ವರದಿಯಲ್ಲಿ ಏನಿದೆ?: `ಎದೆ ಹಾಗೂ ಕತ್ತಿನಲ್ಲಿ ಹಲವಾರು ಗಾಯಗಳಾಗಿದ್ದ ಕಾರಣ ತೋಮರ್ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರ ಎಡಭಾಗದ ಮೂರು, ನಾಲ್ಕು ಹಾಗೂ ಐದನೆಯ ಪಕ್ಕೆಲುಬುಗಳು ಮುರಿದಿವೆ' ಎಂದು ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರ ಮಂಡಳಿಯು ಸಲ್ಲಿಸಿದ 47 ಪುಟಗಳ ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ.

ಕುಟುಂಬದ ಹೇಳಿಕೆ: ತೋಮರ್‌ಗೆ ಹೃದಯದ ತೊಂದರೆ ಇರಲಿಲ್ಲ. ಅವರು ತೀವ್ರ ಗಾಯದಿಂದ ಮೃತಪಟ್ಟಿದ್ದಾಗಿ ಕುಟುಂಬ ವರ್ಗದವರು ಕೂಡ ಈ ಮೊದಲು ಹೇಳಿದ್ದರು.

ಸಮನ್ಸ್: ವ್ಯತಿರಿಕ್ತ ಹೇಳಿಕೆ ನೀಡಿದ್ದಕ್ಕಾಗಿ ಎಲ್ಲ ವೈದ್ಯಕೀಯ ದಾಖಲೆಗಳೊಂದಿಗೆ ತಮ್ಮ ಮುಂದೆ ಹಾಜರಾಗುವಂತೆ ಲೋಹಿಯಾ ಆಸ್ಪತ್ರೆ ಅಧೀಕ್ಷಕ ಸಿಧು ಅವರಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ.

ಹೆಚ್ಚುವರಿ ಪರಿಹಾರ: ಈ ನಡುವೆ ಗೃಹ ಸಚಿವಾಲಯವು ಮೃತರ ಕುಟುಂಬಕ್ಕೆ ರೂ 10 ಲಕ್ಷ ಹೆಚ್ಚುವರಿ ಪರಿಹಾರ ಘೋಷಿಸಿದೆ. ಈಗಾಗಲೇ ದೆಹಲಿ ಪೊಲೀಸರು ಮೃತರ ಕುಟುಂಬಕ್ಕೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದ್ದಾರೆ.

ತಗ್ಗಿದ ಕಾವು: ಇಂಡಿಯಾ ಗೇಟ್ ಹಾಗೂ ರೈಸಿನಾ ಹಿಲ್ಸ್‌ನಲ್ಲಿ ಪ್ರತಿಭಟನೆಯ ಕಾವು ತಗ್ಗಿದ್ದು, ಸಂಚಾರ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ ನಿಷೇಧಾಜ್ಞೆ ಮುಂದುವರಿದಿದೆ.

ರಾತ್ರಿಗೆ ಹೆಚ್ಚಿನ ಬಸ್: ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಹಾಗೂ ರಾತ್ರಿ ಬಸ್‌ನಲ್ಲಿ ಗೃಹರಕ್ಷಕರನ್ನು ನೇಮಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಈ ಸಂಬಂಧ ಸಾರಿಗೆ ಸಚಿವ ರಮಾಕಾಂತ್ ಗೋಸ್ವಾಮಿ ಅವರೊಂದಿಗೆ ಬುಧವಾರ ಸಭೆ ನಡೆಸಿದರು. ಸಾರಿಗೆ ಆಯುಕ್ತ ರಾಜಿಂದರ್ ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು. ರಾತ್ರಿ ವೇಳೆ 45 ಬಸ್‌ಗಳ ಬದಲು 85 ಬಸ್ ವ್ಯವಸ್ಥೆ ಮಾಡುವಂತೆ ಶೀಲಾ ಅವರು ಸಾರಿಗೆ ವಿಭಾಗಕ್ಕೆ ತಾಕೀತು ಮಾಡಿದರು. ಇದಕ್ಕೂ ಮುನ್ನ ಶೀಲಾ, ಸಂಪುಟ ಸಹೋದ್ಯೋಗಿಗಳ ಜತೆ ಸಭೆ ನಡೆಸಿ, ಒಟ್ಟಾರೆ ಪರಿಸ್ಥಿತಿ  ಚರ್ಚಿಸಿದರು.

ಬೃಂದಾ ಟೀಕೆ: `ಯುವತಿ ಹೇಳಿಕೆ ದಾಖಲೆಯ ವಿಷಯದಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ನಡುವಿನ ಜಟಾಪಟಿ “ನಾಚಿಕೆಗೇಡು ಮತ್ತು ಖಂಡನೀಯ” ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯೆ ಬೃಂದಾ ಕಾರಟ್ ಬುಧವಾರ ಹೆಳಿದ್ದಾರೆ.ಇವರಿಬ್ಬರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.

ಜಾಮೀನಿಗೆ ಹಣವಿಲ್ಲ: ಇಂಡಿಯಾ ಗೇಟ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದಕ್ಕೆ ಬಂಧನಕ್ಕೊಳಗಾಗಿದ್ದ 22 ವರ್ಷದ ಯುವಕ ನಫೀಸ್ ಅಹಮದ್ ಬಳಿ ಜಾಮೀನು ಪಡೆಯುವುದಕ್ಕೆ ಹಣವಿಲ್ಲ. ರೂ 10,000  ಭದ್ರತಾ ಠೇವಣಿ ನೀಡದಿದ್ದರೆ ಈತ ಪೊಲೀಸ್ ವಶದಲ್ಲಿಯೇ ಇರಬೇಕಾಗುತ್ತದೆ.

ಒಟ್ಟು 8 ಮಂದಿಯನ್ನು ಪೊಲೀಸರು ಸೋಮವಾರ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು. ಬುಧವಾರ ಭದ್ರತಾ ಠೇವಣಿಯೊಂದಿಗೆ ಹಾಜರಾಗುವಂತೆ ಅಹಮದ್‌ಗೆ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಈತನಿಗೆ ಹಣ ಹೊಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೋರ್ಟ್ ಇನ್ನೆರಡು ದಿನ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.