ADVERTISEMENT

ಸಿಂಭಾವಲಿ ಶುಗರ್ಸ್‌ ವಿರುದ್ಧ ₹110 ಕೋಟಿ ವಂಚನೆ ಆರೋಪ

ಪಿಟಿಐ
Published 26 ಫೆಬ್ರುವರಿ 2018, 20:04 IST
Last Updated 26 ಫೆಬ್ರುವರಿ 2018, 20:04 IST

ನವದೆಹಲಿ: ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ಗೆ (ಒಬಿಸಿ) ₹110 ಕೋಟಿ ನಷ್ಟ ಉಂಟು ಮಾಡಿದ ಆರೋಪದಲ್ಲಿ ಸಿಂಭಾವಲಿ ಶುಗರ್ಸ್‌ (ದೇಶದ ಅತ್ಯಂತ ದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲಿ ಒಂದು) ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ.

ಸಿಂಭಾವಲಿ ಶುಗರ್ಸ್‌ನ ಅಧ್ಯಕ್ಷ ಗುರ್ಮೀತ್‌ ಸಿಂಗ್‌ ಮಾನ್‌, ಉಪ ವ್ಯವಸ್ಥಾಪಕ ನಿರ್ದೇಶಕ ಗುರ್ಪಾಲ್‌ ಸಿಂಗ್‌ ಮತ್ತು ಇತರರನ್ನು ದೂರಿನಲ್ಲಿ ಹೆಸರಿಸಲಾಗಿದೆ. ಗುರ್ಪಾಲ್‌ ಅವರು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ಅಳಿಯ.

ಕಾರ್ಖಾನೆ, ದೆಹಲಿ, ಹಾಪುರ ಮತ್ತು ನೊಯ್ಡಾದಲ್ಲಿರುವ ಕಚೇರಿ ಮತ್ತು ನಿರ್ದೇಶಕರ ಮನೆಗಳಲ್ಲಿ ಸಿಬಿಐ ಭಾನುವಾರ ಶೋಧ ನಡೆಸಿದೆ.

ADVERTISEMENT

ಎರಡು ಸಾಲಗಳಿಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ. ₹97.85 ಕೋಟಿ ಸಾಲವನ್ನು 2015ರಲ್ಲಿಯೇ ವಸೂಲಾಗದ ಸಾಲ ಎಂದು ಘೋಷಿಸಲಾಗಿತ್ತು. ಬಳಿಕ ₹110 ಕೋಟಿ ಸಾಲ ಪಡೆದು ಹಳೆಯ ಸಾಲವನ್ನು ಮರು ಪಾವತಿ ಮಾಡಲಾಗಿದೆ.

ಎರಡನೇ ಸಾಲವನ್ನು 2016ರ ನವೆಂಬರ್‌ನಲ್ಲಿ ವಸೂಲಾಗದ ಸಾಲ ಎಂದು ಘೋಷಿಸಲಾಯಿತು. ನೋಟು ರದ್ದತಿ ನಡೆದ 20 ದಿನಗಳಲ್ಲಿ ಈ ಘೋಷಣೆ ಹೊರಡಿಸಲಾಗಿದೆ.

2015ರ ಸೆಪ್ಟೆಂಬರ್‌ನಲ್ಲಿಯೇ ಈ ವಂಚನೆ ಬಗ್ಗೆ ಸಿಬಿಐಗೆ ದೂರು ನೀಡಲಾಗಿತ್ತು. ಬಳಿಕ 2017ರ ನವೆಂಬರ್‌ನಲ್ಲಿಯೂ ದೂರು ನೀಡಲಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಕೂಡ ನಿಯಮ ಪ್ರಕಾರ ಮಾಹಿತಿ ನೀಡಲಾಗಿದೆ ಎಂದು ಒಬಿಸಿ ತಿಳಿಸಿದೆ.

ಇದೊಂದು ಹಳೆಯ ವಸೂಲಾಗದ ಸಾಲ. ಹಾಗಾಗಿ ಇದು ಬ್ಯಾಂಕ್‌ನ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಬೀರದು ಎಂದೂ ಹೇಳಿದೆ.

*

‘ರೈತರ ಹಣ ಲೂಟಿ ಮಾಡಿದ ಅಮರಿಂದರ್ ಅಳಿಯ’ 

ಕಷ್ಟಪಟ್ಟು ದುಡಿಯುವ ರೈತರಿಗೆ ಸಲ್ಲಬೇಕಾಗಿದ್ದ ಹಣವನ್ನು ಪಂಜಾಬ್‌ ಮುಖ್ಯಮಂತ್ರಿಯ ಸಂಬಂಧಿಕ ಜೇಬಿಗೆ ಹಾಕಿಕೊಂಡದ್ದು ನಾಚಿಕೆಗೇಡು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಈ ಬ್ಯಾಂಕ್‌ ವಂಚನೆ ಪ್ರಕರಣದ ಬಗೆಗಿನ ಟ್ವೀಟನ್ನು ಕಾಂಗ್ರೆಸ್‌ ಅಳಿಸಿ ಹಾಕಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

‘ವಸೂಲಾಗದ ಸಾಲದ ಗೋಜಲು ಕಾಂಗ್ರೆಸ್‌ನ ಸೃಷ್ಟಿ; ವಿಜಯ ಮಲ್ಯ ಮತ್ತು ನೀರವ್‌ ಮೋದಿಯವರಿಗೆ ವಂಚನೆಗೆ ಮುಕ್ತ ಅವಕಾಶ ಕೊಟ್ಟದ್ದೂ ಕಾಂಗ್ರೆಸ್‌ ಪಕ್ಷವೇ. ಇಂತಹ ತಮ್ಮದೇ ದರೋಡೆಗಳನ್ನು ಜೋರಾಗಿ ಹೇಳಿಕೊಳ್ಳುವುದರಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿದೆ’ ಎಂದು ಶಾ ಟ್ವೀಟ್‌ ಮಾಡಿದ್ದಾರೆ. ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನ ಸಾಲ ವಂಚನೆಯ ಸುದ್ದಿಯನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.