ADVERTISEMENT

ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌: ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 8:50 IST
Last Updated 21 ಏಪ್ರಿಲ್ 2018, 8:50 IST

ಬೆಂಗಳೂರು: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಸಲ್ಲಿಕೆಯಾಗಿರುವ ನಿಲುವಳಿ ಸೂಚನೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಚರ್ಚೆ ನಡೆಯುತ್ತಿದೆ. ಟ್ವಿಟರ್‌ನಲ್ಲಿ ಇಂಡಿಯಾ ಸ್ಟಾಂಡ್ಸ್‌ ವಿತ್‌ ಸಿಜೆಐ (#IndiaStandsWithCJI) ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

ಕಾಂಗ್ರೆಸ್‌ ನೇತೃತ್ವದಲ್ಲಿ ಆರು ವಿರೋಧ ಪಕ್ಷಗಳು ಸಿಜೆಐ ವಿರುದ್ಧ ವಾಗ್ದಂಡನೆ ವಿಧಿಸಲು ಶುಕ್ರವಾರ ನಿಲುವಳಿ ಸೂಚನೆ ಸಲ್ಲಿಸಿವೆ. ಈ ಬೆಳವಣಿಗೆಯನ್ನು ಬಿಜೆಪಿ ವಿರೋಧಿಸಿದೆ. ಶನಿವಾರ ಟ್ವಿಟರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಬೆಂಬಲ ಸೂಚಿಸಿ ಅನೇಕರು ಟ್ವೀಟಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಿಲುವಳಿ ಸೂಚನೆ ಸಲ್ಲಿಸುವ ಮೂಲಕ ಕಾಂಗ್ರೆಸ್‌ ನ್ಯಾಯಾಲಯಕ್ಕೆ ಸರಿ‌ಪಡಿಸಲಾಗದಷ್ಟು ಹಾನಿ ಉಂಟು ಮಾಡಿದೆ. ದೇಶಕ್ಕೆ ಗೌರವಕ್ಕೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆದಿದೆ.

ADVERTISEMENT

ವರದಿಗಳ ಪ್ರಕಾರ ಈ ನಡೆಯಿಂದ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 35 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಪ್ರಕಟಿಸಿಕೊಂಡಿದ್ದಾರೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಮೊಕದ್ದಮೆಯಲ್ಲಿ ಜಾಮೀನನ ಮೂಲಕ ಹೊರ ಬಂದ ತಾಯಿ ಮತ್ತು ಮಗ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ವಜಾ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷಗಳು ಸೂಕ್ತ ನೆಲೆಯನ್ನು ಆಧರಿಸಿ ನಿಲುವಳಿ ಸೂಚನೆ ಸಲ್ಲಿಸಿವೆ. ಸಿಜೆಐ ಪರವಾಗಿ ಭಾರತ ನಿಂತಿಲ್ಲ, ಕೆಲವು ಸಂಘಿಗಳಷ್ಟೇ ಎಂದು ಬಿಜೆಪಿ ವಿರುದ್ಧವೂ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿ ಇಂಡಿಯಾ ಸ್ಟಾಂಡ್ಸ್‌ ವಿತ್‌ ಸಿಜೆಐ ಟ್ರೆಂಡ್‌ ಮಾಡಿದೆ. ಸಿಜೆಐ ಅವರ ಪ್ರಮಾಣಿಕತೆ ಮತ್ತು ಬದ್ಧತೆಯ ಕುರಿತು ಪ್ರಶ್ನೆ ಮಾಡಿದಾಗ ಕೇಂದ್ರ ಸರ್ಕಾರ/ಬಿಜೆಪಿ ಅವರನ್ನು ರಕ್ಷಿಸಲು ಆಸಕ್ತಿವಹಿಸಿರುವುದು ಏಕೆ ಎಂದು ಸಜುಕ್ತಾ ಬಸು ಟ್ವೀಟಿಸಿದ್ದಾರೆ.

ಈ ಬೆಳವಣಿಗೆ ದೇಶದ ತಳಪಾಯಕ್ಕೆ ಹಾನಿ ಉಂಟು ಮಾಡಬಲ್ಲದಾಗಿದೆ. ಇದರಿಂದ ದೇಶಕ್ಕೆ ಆಗುತ್ತಿರುವ ಹಾನಿಯ ಕಲ್ಪನೆಯೂ ಆ ದ್ರೋಹಿಗಳಿಗೆ ಇಲ್ಲ... ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.