ADVERTISEMENT

ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

ಸಭಾಪತಿ ನಾಯ್ಡು ಭೇಟಿಯಾದ ವಿರೋಧ ಪಕ್ಷಗಳು

ಪಿಟಿಐ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ದೀಪಕ್‌ ಮಿಶ್ರಾ
ದೀಪಕ್‌ ಮಿಶ್ರಾ   

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ಆರು ವಿರೋಧ ಪಕ್ಷಗಳು ಶುಕ್ರವಾರ ನಿಲುವಳಿ ಸೂಚನೆ ಸಲ್ಲಿಸಿವೆ.

ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ನಿವಾಸಕ್ಕೆ ತೆರಳಿದ ವಿರೋಧ ಪಕ್ಷಗಳ ಮುಖಂಡರು ನಿಲುವಳಿ ನೋಟಿಸ್‌ ನೀಡಿದರು.

ರಾಜ್ಯಭೆಯ 71 ಮಂದಿ ಈ ನೋಟಿಸ್‌ಗೆ ಸಹಿ ಹಾಕಿದ್ದಾರೆ. ಈ ಪೈಕಿ 7 ಸದಸ್ಯರು ನಿವೃತ್ತರಾದ ಕಾರಣ ಸಹಿ ಹಾಕಿದವರ ಸಂಖ್ಯೆ 64ಕ್ಕೆ ಇಳಿದಿದೆ. ವಾಗ್ದಂಡನೆಗೆ 50 ಸದಸ್ಯರ ಸಹಿ ಸಾಕು.

ADVERTISEMENT

ಕಾಂಗ್ರೆಸ್‌, ಸಿಪಿಎಂ, ಸಿಪಿಐ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಮುಸ್ಲಿಂ ಲೀಗ್‌ ಮತ್ತು ಎನ್‌ಸಿಪಿ ಸಂಸದರು ನಿಲುವಳಿ ಮಂಡನೆಗೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ.

ಅನುಚಿತ ವರ್ತನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮಿಶ್ರಾ ವಿರುದ್ಧ ಒಟ್ಟು ಐದು ಗಂಭೀರ ಆರೋಪ ಮಾಡಲಾಗಿದೆ.  ಕಾಂಗ್ರೆಸ್‌ ನಾಯಕರಾದ ಗುಲಾಂ ನಬಿ ಆಜಾದ್‌, ಕಪಿಲ್‌ ಸಿಬಲ್‌ ನೇತೃತ್ವದಲ್ಲಿ ಉಪ ರಾಷ್ಟ್ರಪತಿಯನ್ನು ಭೇಟಿ ಮಾಡಿದ ವಿರೋಧ ಪಕ್ಷಗಳ ಮುಖಂಡರು 40 ನಿಮಿಷ ಅವರ ಜತೆ ಚರ್ಚೆ ನಡೆಸಿದರು. ವಂದನಾ ಚವ್ಹಾಣ್‌, ಡಿ. ರಾಜಾ, ಕೆ.ಟಿ.ಎಸ್‌ ತುಳಸಿ ಸೇರಿದಂತೆ ಅನೇಕ ಮುಖಂಡರು ನಿಯೋಗದಲ್ಲಿ ಇದ್ದರು.

ಇದಕ್ಕೂ ಮುನ್ನ ಸಭೆ ಸೇರಿ ಚರ್ಚಿಸಿದ ವಿರೋಧ ಪಕ್ಷಗಳ ನಾಯಕರು, ಮಿಶ್ರಾ ವಿರುದ್ಧ ವಾಗ್ದಂಡನೆ ಕುರಿತು ಒಮ್ಮತದ ನಿರ್ಧಾರ ಕೈಗೊಂಡರು.

ನ್ಯಾಯಾಧೀಶ ಲೋಯಾ ಸಾವಿನ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ನೀಡಿದ್ದ ತೀರ್ಪು ವಿರೋಧ ಪಕ್ಷಗಳನ್ನು ಮತ್ತಷ್ಟು ಕೆರಳಿಸಿದೆ.

‘ನಿಲುವಳಿ ಅಗತ್ಯ ಸದಸ್ಯರ ಬಲ ಹೊಂದಿದೆ ಎಂದು ನಾಯ್ಡು ಅವರಿಗೆ ಮನವರಿಕೆ ಮಾಡಿಕೊಡಲಾಯಿತು’ ಎಂದು ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಸುದ್ದಿಗಾರರಿಗೆ ತಿಳಿಸಿದರು.

‘ಇಂಥದೊಂದು ದಿನ ಖಂಡಿತ ಬರಬಾರದು. ಆದರೂ, ಭಾರವಾದ ಹೃದಯದಿಂದ ಇಂತಹ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಕಪಿಲ್‌ ಸಿಬಲ್‌ ಹೇಳಿದರು.

ಮಿಶ್ರಾ ವಿರುದ್ಧ ಬಹಿರಂಗ ಬಂಡಾಯ ಎದ್ದಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದ ಆರೋಪಗಳನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸಿವೆ.

ಏನಾಗಬಹುದು?
* 1968ರ ನ್ಯಾಯಾಧೀಶರ ವಿಚಾರಣೆ ಕಾಯ್ದೆ ಅನ್ವಯ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನ್ಯಾಯಮೂರ್ತಿಗಳ ಪದಚ್ಯುತಿಗೆ ಮಂಡಿಸುವ ಅವಿಶ್ವಾಸ ನಿಲುವಳಿಗೆ ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಇಲ್ಲವೇ ಲೋಕಸಭೆಯ 100 ಸದಸ್ಯರ ಬೆಂಬಲ ಅಗತ್ಯ.
* ವಾಗ್ದಂಡನೆ ನಿಲುವಳಿ ಕುರಿತು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ನಂತರ ಸಭಾಪತಿಯಿಂದ ಅಂತಿಮ ನಿರ್ಧಾರ.
* ನಿಲುವಳಿಯನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರವನ್ನು ಸಭಾಪತಿ ಹೊಂದಿದ್ದಾರೆ..
* ಒಂದು ವೇಳೆ ಪದಚ್ಯುತಿ ಗೊತ್ತುವಳಿ ಅಂಗೀಕಾರವಾದರೆ ಮುಖ್ಯ ನ್ಯಾಯಮೂರ್ತಿ ವಿರುದ್ಧದ ಆರೋಪಗಳ ವಿಚಾರಣೆಗೆ ಸಮಿತಿ ರಚಿಸಬೇಕಾಗುತ್ತದೆ.
* ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ನುರಿತ ಕಾನೂನು ತಜ್ಞರನ್ನು ಒಳಗೊಂಡ ಸಮಿತಿ ರಚಿಸುವ ಅಧಿಕಾರವನ್ನು ಸಭಾಪತಿ ಹೊಂದಿರುತ್ತಾರೆ.
* ಒಂದು ವೇಳೆ ಸಭಾಪತಿಯು ನಿಲುವಳಿಯನ್ನು ತಿರಸ್ಕರಿಸಿದರೆ ಆ ಬಗ್ಗೆ ನ್ಯಾಯಾಂಗ ಪರಿಶೀಲನೆ ನಡೆಸಲು ಮುಕ್ತ ಅವಕಾಶ ಇದೆ.

ದುರ್ದೈವದ ಸಂಗತಿ: ಸುಪ್ರೀಂ ಕೋರ್ಟ್ ಕಳವಳ
ನವದೆಹಲಿ:
ಮುಖ್ಯ ನ್ಯಾಯಮೂರ್ತಿಯ ವಿರುದ್ಧ ವಾಗ್ದಂಡನೆ ನಿರ್ಧಾರ ದುರ್ದೈವದ ಸಂಗತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘ರಾಜಕಾರಣಿಗಳು ಮಾಧ್ಯಮಗಳ ಎದುರು ನ್ಯಾಯಮೂರ್ತಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಈ ಬೆಳವಣಿಗೆಯಿಂದ ನಾವು ವಿಚಲಿತರಾಗಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಪ್ರತಿಕ್ರಿಯಿಸಿದ್ದಾರೆ.

ವಿವಾದಾತ್ಮಕ ಹಗರಣಗಳ ಬಗ್ಗೆ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ವಿಷಯದಲ್ಲಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರ ನೆರವು ಕೋರಿದರು.

ಕಾಂಗ್ರೆಸ್‌ಗೆ ರಾಜಕೀಯ ಅಸ್ತ್ರ: ಬಿಜೆಪಿ ಕಿಡಿ
ವಾಗ್ದಂಡನೆ ಅಧಿಕಾರವನ್ನು ಕಾಂಗ್ರೆಸ್‌ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಕಿಡಿ ಕಾರಿದ್ದಾರೆ.

ನ್ಯಾಯಾಧೀಶ ಲೋಯಾ ನಿಗೂಢ ಸಾವಿನ ಬಗ್ಗೆ ನೀಡಿದ 114 ಪುಟಗಳ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎಲ್ಲರ ಬಣ್ಣ ಬಯಲು ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

*
ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯಮೂರ್ತಿಗಳು ಹೇಳಿದಾಗ ಯಾರಿಗೂ ಏನೂ ಮಾಡಲಾಗಲಿಲ್ಲ. ನ್ಯಾಯಾಂಗ ವ್ಯವಸ್ಥೆ ಉಳಿಸಲು ವಾಗ್ದಂಡನೆಯೊಂದೇ ಈಗ ಉಳಿದಿರುವ ಏಕೈಕ ಮಾರ್ಗ.
–ಕಪಿಲ್‌ ಸಿಬಲ್‌, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.