ADVERTISEMENT

ಸಿಪಿಎಂ ಮುಖಂಡ ಎಂ.ಕೆ. ಪಂಧೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2011, 19:30 IST
Last Updated 20 ಆಗಸ್ಟ್ 2011, 19:30 IST
ಸಿಪಿಎಂ ಮುಖಂಡ ಎಂ.ಕೆ. ಪಂಧೆ ಇನ್ನಿಲ್ಲ
ಸಿಪಿಎಂ ಮುಖಂಡ ಎಂ.ಕೆ. ಪಂಧೆ ಇನ್ನಿಲ್ಲ   

ನವದೆಹಲಿ (ಪಿಟಿಐ): ಹೆಸರಾಂತ ಕಾರ್ಮಿಕ ಮುಖಂಡ ಮತ್ತು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಮಧುಕರ್ ಕಾಶೀನಾಥ್ ಪಂಧೆ ಹೃದಯಾಘಾತದಿಂದ ಶುಕ್ರವಾರ ಮಧ್ಯರಾತ್ರಿ 12.30ಕ್ಕೆ ನಿಧನರಾದರು.

ಶುಕ್ರವಾರ ಸಂಜೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 86 ವರ್ಷದ ಪಾಂಡೆ ಅವರನ್ನು ಇಲ್ಲಿನ ರಾಮ ಮೋಹನ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಂಧೆ ಅವರಿಗೆ ಪತ್ನಿ ಪ್ರಮೀಳಾ ಮತ್ತು ಒಬ್ಬ ಪುತ್ರ ಇದ್ದಾರೆ. ಪತ್ನಿ ಪ್ರಮೀಳಾ ಕೂಡ ಸಿಪಿಎಂನ ಪ್ರಮುಖ ನಾಯಕಿಯಾಗಿದ್ದಾರೆ.

ಏಳು ದಶಕಗಳ ಅವರ ಸಾರ್ವಜನಿಕ ಜೀವನ ವಿದ್ಯಾರ್ಥಿಯಾಗಿದ್ದಾಗಲೇ ಆರಂಭಗೊಂಡಿತ್ತು. ಪುಣೆಯಲ್ಲಿ 1925ರ ಜುಲೈ11ರಂದು ಜನಿಸಿದ ಪಾಂಡೆ 1943ರಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿ, ನಂತರ ನಂತರ ಕಾರ್ಮಿಕ ವರ್ಗದ ಚಳವಳಿಯ ದೊಡ್ಡ ನಾಯಕರಾಗಿ ಬೆಳೆದರು. ಪುಣೆ ವಿಶ್ವವಿದ್ಯಾಲಯದಿಂದ  ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಗೋಖಲೆ ರಾಜಕೀಯ ಶಾಸ್ತ್ರ ಮತ್ತು ಅರ್ಥಶಾಸ್ತ್ರ ಸಂಸ್ಥೆಯಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದರು. ಸೋಲಾಪುರ ನಗರ ಸಿಪಿಐ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಗೋವಾ ವಿಮೋಚನಾ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.