ADVERTISEMENT

ಸಿಲಿಂಡರ್ ಅಭಾವ: ಕೇಂದ್ರಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ನವದೆಹಲಿ: `ಗೃಹ ಬಳಕೆಗೆ ಪೂರೈಕೆಯಾಗಬೇಕಾದ ಅಡುಗೆ ಅನಿಲ ಸಿಲಿಂಡರ್‌ಗಳು ಕಾಳಸಂತೆಗೆ ಹೋಗುತ್ತಿವೆ. ಇದರಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಅಭಾವ ತಲೆದೋರಿದ್ದು ಶೀಘ್ರ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಅಡುಗೆ ಅನಿಲ ಅಭಾವದಿಂದಾಗಿ ಗ್ರಾಹಕರು ಪರದಾಡುತ್ತಿದ್ದಾರೆ. ಸಿಲಿಂಡರ್‌ಗೆ ಹೆಸರು ನೋಂದಣಿ ಮಾಡಿದ ಬಳಿಕ ಒಂದು ತಿಂಗಳು ಕಾಯಬೇಕಾಗಿದೆ. ತೈಲ ಕಂಪೆನಿಗಳು ವಿಳಂಬಕ್ಕೆ ಸೂಕ್ತ ಕಾರಣ ನೀಡುತ್ತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ರಾಜ್ಯದ ಆಹಾರ ಮತ್ತು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಪೆಟ್ರೋಲಿಯಂ ಖಾತೆ ಸಚಿವ ಎಸ್. ಜೈಪಾಲ್‌ರೆಡ್ಡಿ ಅವರನ್ನು ಭೇಟಿ ಮಾಡಿ ಸಿಲಿಂಡರ್ ಸಮಸ್ಯೆ ಕುರಿತು ಮಾತುಕತೆ ನಡೆಸಿದರು. ಸಿಲಿಂಡರ್‌ಗೆ ನೋಂದಣಿ ಮಾಡಿದ ಒಂದು ವಾರದಲ್ಲಿ ಪೂರೈಕೆ ಮಾಡುವಂತೆ ತೈಲ ಕಂಪೆನಿ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಅನಿಲ ಸಿಲಿಂಡರ್ ಬಳಕೆಗೆ ಟ್ಯಾಂಕರ್‌ಗಳ ಮುಷ್ಕರ ಕಾರಣ ಎಂದು ಅಧಿಕಾರಿಗಳು ಹೇಳಿದ್ದರು. ಟ್ಯಾಂಕರ್ ಮುಷ್ಕರ ಅಂತ್ಯಗೊಂಡು ಎರಡು ತಿಂಗಳಾಗಿದ್ದರೂ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಗ್ರಾಹಕರಿಗೆ ವಿತರಣೆ ಆಗಬೇಕಾದ ಸಿಲಿಂಡರ್‌ಗಳು ದೊಡ್ಡ ಪ್ರಮಾಣದಲ್ಲಿ ಕಾಳಸಂತೆಗೆ ಹೋಗುತ್ತಿವೆ. ಈ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಒತ್ತಾಯ ಮಾಡಿದರು.

ರಾಜ್ಯದಲ್ಲಿ ಸಿಲಿಂಡರ್‌ಗಳ ಅಕ್ರಮ ಸಂಪರ್ಕ ಪತ್ತೆಗೆ ತಮ್ಮ ಸರ್ಕಾರ ಕ್ರಮ ಕೈಗೊಂಡಿತ್ತು.  ವಿದ್ಯುತ್ ಮೀಟರ್ ಸಂಖ್ಯೆ ಆಧಾರದಲ್ಲಿ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿತ್ತು. ಕೇಂದ್ರ ಸರ್ಕಾರವೂ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಲು ಮುಂದಾಗಬೇಕು. ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಬೇಕು. ಇದರಿಂದ ನಿಜವಾದ ಗ್ರಾಹಕರಿಗೆ ಸಕಾಲಕ್ಕೆ ಸಿಲಿಂಡರ್‌ಗಳು ಲಭ್ಯವಾಗಲಿವೆ ಎಂದು ಜೈಪಾಲ್‌ರೆಡ್ಡಿ ಅವರಿಗೆ ಶೋಭಾ ಸಲಹೆ ಮಾಡಿದರು.

ಕಲ್ಲಿದ್ದಲು ಪೂರೈಕೆ: ಈ ಮಧ್ಯೆ, ಇಂಧನ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ, ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ 2ನೇ ಘಟಕಕ್ಕೆ ನಿರಂತರವಾಗಿ ಕಲ್ಲಿದ್ದಲು ಪೂರೈಸಬೇಕು ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರಿಗೆ ಪ್ರತ್ಯೇಕವಾಗಿ ಮನವಿ ಮಾಡಿದರು.

ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸಲು 500 ಮೆ.ವಾ ಸಾಮರ್ಥ್ಯದ ಬಳ್ಳಾರಿ 2ನೇ ಘಟಕದಲ್ಲಿ ಸತತವಾಗಿ ವಿದ್ಯುತ್ ಉತ್ಪಾದನೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ `ಮಹಾನದಿ ಗಣಿ~ಯಿಂದ ನಿರಂತರವಾಗಿ ಕಲ್ಲಿದ್ದಲು ಕೊಡಬೇಕು ಎಂದು ಶೋಭಾ ಕರಂದ್ಲಾಜೆ ಸಚಿವರಿಗೆ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.