ADVERTISEMENT

ಸುಖ್‌ರಾಂಗೆ ಜಾಮೀನು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

 ನವದೆಹಲಿ (ಪಿಟಿಐ): 1993ರ ಟೆಲಿಕಾಂ ಹಗರಣದಲ್ಲಿ ಮೂರು ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಸುಖ್‌ರಾಂ ಅವರಿಗೆ ಸೋಮವಾರ ಸುಪ್ರೀಂಕೋರ್ಟ್, ಆಗಸ್ಟ್ 7ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿ ತೀರ್ಪು ನೀಡಿದೆ.

ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ನ್ಯಾಯಪೀಠವು, ಇದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಇತರ ಆರೋಪಿಗಳಾದ ಮಾಜಿ ಅಧಿಕಾರಿ ರುನು ಘೋಷ್ ಮತ್ತು ಹೈದರಾಬಾದ್ ಮೂಲದ ವಾಣಿಜ್ಯೋದ್ಯಮಿ ಪಿ. ರಾಮರಾವ್ ಅವರಿಗೂ ಮಧ್ಯಂತರ ಜಾಮೀನು ವಿಸ್ತರಿಸಿದರು.

ಇದರಿಂದಾಗಿ ಈ ಎಲ್ಲ ಆರೋಪಿಗಳು ತಮಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಮುಂದಿನ ವಿಚಾರಣೆ ಆಗಸ್ಟ್ 7ರಂದು ನಡೆಯಲಿದೆ.

ಈ ಹಿಂದೆ ಜನವರಿ 9ರಂದು ತೀರ್ಪು ನೀಡಿದ್ದ ನ್ಯಾಯಪೀಠವು, ಸೋಮವಾರದವರೆಗೆ (ಜನವರಿ 16) ಮಧ್ಯಂತರ ಜಾಮೀನು ಮಂಜೂರು ಮಾಡಿ, ಸಿಬಿಐಗೂ ನೋಟಿಸ್ ಜಾರಿ ಮಾಡಿತ್ತು. ಆದರೆ ಸಿಬಿಐ ಈವರೆಗೂ ಈ ನೋಟಿಸ್‌ಗೆ ಲಿಖಿತವಾಗಿ ಉತ್ತರಿಸಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೇಲ್ಮನವಿ ಸಲ್ಲಿಸುವುದೇ ಅಥವಾ ಇಲ್ಲವೇ ಎಂಬುದು ತಮಗೆ ತಿಳಿಯದೆಂದು ಅದರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ಟಂಖಾ, ನ್ಯಾಯಪೀಠದ ಪ್ರಶ್ನೆಗೆ ಮೌಖಿಕವಾಗಿ ಉತ್ತರಿಸಿದ್ದರು. ಜೊತೆಗೆ ತನಿಖಾ ಸಂಸ್ಥೆಯಿಂದ ಈ ಬಗ್ಗೆ ಸೂಚನೆ ಪಡೆಯುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.