ADVERTISEMENT

ಸುಪ್ರೀಂನಲ್ಲೂ ಕನಿಮೊಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST
ಸುಪ್ರೀಂನಲ್ಲೂ ಕನಿಮೊಳಿಗೆ ನಿರಾಸೆ
ಸುಪ್ರೀಂನಲ್ಲೂ ಕನಿಮೊಳಿಗೆ ನಿರಾಸೆ   

ನವದೆಹಲಿ, (ಐಎಎನ್‌ಎಸ್): 2 ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಮನೆಯಲ್ಲಿರುವ ಡಿಎಂಕೆ ಸಂಸದೆ ಕನಿಮೊಳಿ ಮತ್ತು ಕಲೈಂಞ್ಞರ್ ಟಿವಿ ಆಡಳಿತ ನಿರ್ದೇಶಕ ಶರತ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸುವುದರೊಂದಿಗೆ ಕನಿಮೊಳಿ ಅವರ ಬಿಡುಗಡೆ ಕನಸು ಭಗ್ನಗೊಂಡಂತಾಗಿದೆ. 

ಆದರೆ, ಕೆಳಹಂತದ ನ್ಯಾಯಾಲಯ ಕನಿಮೊಳಿ ಅವರ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿದ ನಂತರ ಪುನಃ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಜಿ. ಎಸ್. ಸಿಂಘ್ವಿ ಮತ್ತು ಬಿ. ಎಸ್. ಚೌಹಾನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳುವ ಮೂಲಕ  ಭರವಸೆಯ ಹೊಸ ಕಿರಣವೊಂದನ್ನು ನೀಡಿದೆ.  

60 ವರ್ಷದೊಳಗಿನ ಮಹಿಳೆಯರಿಗೆ ಜಾಮೀನಿನಲ್ಲಿ ವಿಶೇಷ ರಿಯಾಯಿತಿ ನೀಡುವ  ಸಿಆರ್‌ಪಿಸಿ  ಕಲಂ 437ರ ಅನ್ವಯ ಕನಿಮೊಳಿ ಅವರು ಜಾಮೀನು ಕೋರಬಹುದಾಗಿದೆ ಎಂದು ನ್ಯಾಯಪೀಠ ಸಲಹೆ ಮಾಡಿದೆ. ಈ ಹಿಂದೆ ಕನಿಮೊಳಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರೂ ಅದರಿಂದ ಕೆಳಹಂತದ ನ್ಯಾಯಾಲಯ ಯಾವುದೇ ಪ್ರಭಾವಕ್ಕೊಳಗಾಗುವುದಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ.

ಬೆಳಿಗ್ಗೆ 10.30ರಿಂದ 12 ಗಂಟೆವರೆಗೆ  ನಡೆದ ವಿಚಾರಣೆಯ ವೇಳೆ ಕನಿಮೊಳಿ ಹಾಗೂ  ಶರತ್ ಕುಮಾರ್ ಅವರ ವಕೀಲರುಗಳು ಮತ್ತು ಕುಟುಂಬದ ಸದಸ್ಯರು ಜಾಮೀನು ದೊರೆಯಬಹುದೆಂಬ ನಿರೀಕ್ಷೆ ಹೊಂದಿದ್ದರು. ಆದರೆ 12.30 ಗಂಟೆಗೆ ಹೊರಬಿದ್ದ ಆದೇಶದಿಂದ ಅವರು ತೀವ್ರ ನಿರಾಸೆಗೊಳಗಾದರು.

ತಾನು ತಾಯಿಯಾಗಿದ್ದು ತನ್ನ ಮಗುವಿನೊಂದಿಗೆ ಕಾಲ ಕಳೆಯಲು ಅವಕಾಶ ಮಾಡಿಕೊಡಬೇಕಲ್ಲದೆ ಜಾಮೀನಿಗಾಗಿ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ದವಾಗಿರುವುದಾಗಿಯೂ ವಿಚಾರಣೆ ವೇಳೆ ಕನಿಮೊಳಿ ನ್ಯಾಯಪೀಠವನ್ನು ಕೋರಿದ್ದರು. ಆದರೆ ಇದಾವುದನ್ನೂ ಪರಿಗಣಿಸದ ನ್ಯಾಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

 ಜುಲೈ 4ರವರೆಗೆ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನ್ಯಾಯಾಲಯದ  ನ್ಯಾಯಾಧೀಶರಾದ ಒ.ಪಿ. ಸೈನಿ ಅವರು ಮರಳಿದ ಬಳಿಕ 2 ಜಿ ತರಂಗಾಂತರಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಕುರಿತು ವಿಚಾರಣೆಯನ್ನು ಪುನರಾರಂಭಿಸಲಿದ್ದಾರೆ.

ಕಲೈಂಞ್ಞರ್ ಟಿವಿಯಲ್ಲಿ ಶೇ 20ರಷ್ಟು ಶೇರುಗಳನ್ನು ಹೊಂದಿರುವ ಕನಿಮೊಳಿ ಮತ್ತು ಶರತ್‌ಕುಮಾರ್ ಅವರು ಎ. ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದ ವೇಳೆ 2 ಜಿ ತರಂಗಾಂತರ ಹಂಚಿಕೆಯ ಲಾಭ ಪಡೆದಿದ್ದ ಸ್ವಾನ್ ಟೆಲಿಕಾಂನ ಶಾಹಿದ್ ಉಸ್ಮಾನ್ ಬಲ್ವಾ ಅವರಿಂದ 200 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎನ್ನಲಾಗಿದೆ.

ಈ ಆರೋಪದ ಮೇರೆಗೆ ಮೇ 20ರಂದು ಅವರನ್ನು ಬಂಧಿಸಲಾಗಿತ್ತು.   ಜೂನ್ 8ರಂದು ದಿಲ್ಲಿ ನ್ಯಾಯಾಲಯ ತಮ್ಮ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ ಹಿನ್ನೆಲೆಯಲ್ಲಿ  ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಬಲ್ವಾ ಅರ್ಜಿ ವಾಪಸ್: ಕನಿಮೊಳಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದ ಕೆಲವೇ ನಿಮಿಷಗಳೊಳಗಾಗಿ  ಸ್ವಾನ್ ಟೆಲಿಕಾಂನ ಶಾಹಿದ್ ಉಸ್ಮಾನ್ ಬಲ್ವಾ ಸೇರಿದಂತೆ ಪ್ರಕರಣದ ಮೂವರು ಆರೋಪಿಗಳು ದಿಲ್ಲಿ ನ್ಯಾಯಾಲಯದಿಂದ ತಾವು ಸಲ್ಲಿಸಿದ ಜಾಮೀನು ಅರ್ಜಿಯನ್ನು ವಾಪಸ್ ಪಡೆದುಕೊಂಡರು.

`ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೊಸ ಜಾಮೀನು ಸಲ್ಲಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ~ ಎಂದು ಬಲ್ವಾ ಪರ ವಕೀಲರಾದ ಮಜೀದ್ ಮೆಮೊನ್ ಅಭಿಪ್ರಾಯಪಟ್ಟರು.

ಇದೇ ವೇಳೆ ಪ್ರಕರಣದ ಇತರ ಆರೋಪಿಗಳಾದ ಆಸಿಫ್ ಬಲ್ವಾ ಮತ್ತು ರಾಜೀವ್ ಅಗರ್‌ವಾಲ್ ಅವರ ಜಾಮೀನು ಅರ್ಜಿಯನ್ನೂ ವಾಪಸ್ ಪಡೆಯಲಾಯಿತು.

ವಿಶೇಷ ನ್ಯಾಯಾಲಯ ಒಂದೆರಡು ತಿಂಗಳೊಳಗಾಗಿ ಆರೋಪಪಟ್ಟಿ ಸಲ್ಲಿಸಲಿದ್ದು  ವಿಚಾರಣೆಗೆ ಸಿದ್ಧತೆ ನಡೆಸುವ ಸಲುವಾಗಿ ತನ್ನ ಕಕ್ಷಿದಾರನಾದ ಬಲ್ವಾಗೆ ಜಾಮೀನು ನೀಡಬೇಕೆಂದು ವಕೀಲರಾದ ಮಜೀದ್ ಕೋರಿದ್ದರು.

ಇಂದು ದೆಹಲಿಗೆ ಕರುಣಾನಿಧಿ

ಚೆನ್ನೈ(ಪಿಟಿಐ) : ತಮ್ಮ ಪುತ್ರಿ ಕನಿಮೊಳಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವ  ಕಾರಣ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಬಹಳ ನೊಂದುಕೊಂಡಿದ್ದಾರೆ ಎಂದು  ಡಿಎಂಕೆ ಪಕ್ಷದ ಮೂಲಗಳು ಹೇಳಿದ್ದು,  ಕರುಣಾನಿಧಿ ಅವರು ಕನಿಮೊಳಿಗೆ ದೂರವಾಣಿಯ ಮೂಲಕ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿಸಿವೆ. ಕರುಣಾನಿಧಿ ಅವರು ಮಂಗಳವಾರ ಇಲ್ಲಿಂದ ದೆಹಲಿಗೆ ತೆರಳಿ ಅಲ್ಲಿ ತಿಹಾರ್ ಜೈಲಿನಲ್ಲಿರುವ ತಮ್ಮ ಮಗಳನ್ನು ಭೇಟಿಯಾಗಲಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.