ADVERTISEMENT

ಸುಷ್ಮಾಗೆ ಜೇಟ್ಲಿ ತರಾಟೆ

ಶ್ರೀರಾಮುಲು ಬಿಜೆಪಿ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ನವದೆಹಲಿ: ಬಿಎಸ್‌ಆರ್‌ ಕಾಂಗ್ರೆಸ್‌ ಸಂಸ್ಥಾಪಕ ಬಿ. ಶ್ರೀರಾಮುಲು ಮರಳಿ ಬಿಜೆಪಿಗೆ ಸೇರ್ಪಡೆ ಆಗಿರುವ ವಿಷಯ   ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ ಮಧ್ಯೆ  ತೀವ್ರ ಜಟಾಪಟಿಗೆ ಕಾರಣವಾಗಿದೆ.

ಇವರಿಬ್ಬರೂ ಟ್ವಿಟರ್‌ ಹಾಗೂ ಬ್ಲಾಗ್‌ಗಳ ಮೂಲಕ ಪರಸ್ಪರ ಜಗಳಕ್ಕೆ ಇಳಿದಿದ್ದಾರೆ.

ತಮ್ಮ ತೀವ್ರ ವಿರೋಧದ ನಡು­ವೆ­ಯೂ ಶ್ರೀರಾಮುಲು ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳ­ಲಾಗಿದೆ ಎಂದು  ಸುಷ್ಮಾ ಶುಕ್ರವಾರ ‘ಟ್ವಿಟರ್‌’ನಲ್ಲಿ ಅಸಮಾ­ಧಾನ ಹೊರಹಾಕಿದ್ದರು. ಇದಕ್ಕೆ ಪ್ರತಿಯಾಗಿ ಜೇಟ್ಲಿ ತಮ್ಮ ಸಹೋದ್ಯೋಗಿ ಮೇಲೆ ಹರಿಹಾಯ್ದು ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ. 

‘ಯಾರು ಬಂದರು ಅಥವಾ ಹೋದರು ಎನ್ನುವುದು ಪಕ್ಷಕ್ಕೆ ಮುಖ್ಯವಾಗಬಾರದು. ಇವೆಲ್ಲವೂ ತೀರಾ ಕ್ಷುಲ್ಲಕ ಸಂಗತಿ. ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮಹತ್ವದ ವಿಷಯಗಳ ಕಡೆ ಗಮನ ಕೊಡಬೇಕು’ ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಸಲಹೆ ಮಾಡಿದ್ದಾರೆ. ಆದರೆ ಅವರು ಎಲ್ಲಿಯೂ ಸುಷ್ಮಾ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿನಲ್ಲಿರುವ ಜನಾರ್ದನರೆಡ್ಡಿ ಅವರ ಆಪ್ತ ಶ್ರೀರಾಮುಲು ಅವ­ರನ್ನು ಬಿಜೆಪಿ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸು­ತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ.

‘ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಅಗತ್ಯ ಬಹುಮತ ಪಡೆಯಲಿದೆ ಎಂದು ಹೇಳಿವೆ. ಮೋದಿ ನಾಯಕತ್ವ, ಯುಪಿಎ ಸರ್ಕಾರಕ್ಕಿರುವ ಆಡಳಿತ ವಿರೋಧಿ ಅಲೆಯು ಬಿಜೆಪಿಗೆ ಲಾಭವಾಗಲಿದೆ. ಯಾರು ಸುಭದ್ರ ಸರ್ಕಾರ ಕೊಡುತ್ತಾರೆಂದು ಜನ ಚಿಂತಿಸು­ತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಈ ವಿಷಯಗಳ ಕಡೆ ನಾವು ಗಮನ ಹರಿಸ­ಬೇಕಾಗಿದೆ’ ಎಂದು ಜೇಟ್ಲಿ ಅಭಿಪ್ರಾಯ­ಪಟ್ಟಿ­ದ್ದಾರೆ.

‘ಎನ್‌ಡಿಎ 273ರ ಮಾಯಾ ಸಂಖ್ಯೆ  ತಲುಪು­ವು­ದ­ರಲ್ಲಿ ಸಂದೇಹವಿಲ್ಲ. ಆದರೆ, ಬಿಜೆಪಿ ತನ್ನ ಸ್ಥಿತಿ­ಯನ್ನು ಇನ್ನಷ್ಟು ಉತ್ತಮ­ಪಡಿಸಿಕೊಳ್ಳಬೇಕಿದೆ. ಅನಗತ್ಯವಾಗಿ ಮತ­ಗಳನ್ನು ವ್ಯರ್ಥ ಮಾಡದಂತೆ ಜನರಿಗೆ ಜಾಗೃತಿ ಮೂಡಿಸ­ಬೇಕಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.