ADVERTISEMENT

ಸೇನಾ ಮುಖ್ಯಸ್ಥರ ಹೇಳಿಕೆ ಪಡೆದ ಸಿಬಿಐ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ನವದೆಹಲಿ (ಐಎಎನ್‌ಎಸ್): ಕಳಪೆ ದರ್ಜೆ ವಾಹನ ಖರೀದಿಗೆ ಹಿರಿಯ ಅಧಿಕಾರಿಯೊಬ್ಬರು 2010ರಲ್ಲಿ ತಮಗೆ ಲಂಚ ನೀಡಲು ಮುಂದಾಗಿದ್ದರು ಎಂದು ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಸಿಂಗ್ ಅವರ ಹೇಳಿಕೆ ದಾಖಲಿಸಿಕೊಂಡಿದೆ.

ಡಿಐಜಿ ನೇತೃತ್ವದ ತಂಡವು ಸಿಂಗ್ ಅವರನ್ನು ದಕ್ಷಿಣ ಬ್ಲಾಕ್‌ನಲ್ಲಿರುವ ಅವರ ಕಚೇರಿಯಲ್ಲಿ ಸುಮಾರು ಎರಡು ತಾಸು ಪ್ರಶ್ನಿಸಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.

2010ರ ಸೆಪ್ಟೆಂಬರ್ 22ರಂದು ಲೆ.ಜ. ತೇಜಿಂದರ್ ಸಿಂಗ್ ಅವರು ಕಳಪೆ ದರ್ಜೆ ವಾಹನ ಖರೀದಿಗೆ ವೆಕ್ಟ್ರಾ ಗ್ರೂಪ್ ಅಧ್ಯಕ್ಷ ರವೀಂದರ್ ರಿಶಿ ಅವರ ಪರವಾಗಿ ತಮಗೆ 14 ಕೋಟಿ ರೂಪಾಯಿ ಲಂಚ ನೀಡಲು ಬಂದಿದ್ದರು ಎಂದು ವಿ.ಕೆ.ಸಿಂಗ್ ಸಿಬಿಐಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.

ಸಿಂಗ್ ಅವರಿಗೆ ಮುಂಚಿತವಾಗಿಯೇ ಪ್ರಶ್ನಾವಳಿಗಳನ್ನು ಕಳುಹಿಸಲಾಗಿತ್ತು. ಲಂಚದ ಆಮಿಷ ತೋರಿಸಿದಾಗ ಅವರು ತೆಗೆದುಕೊಂಡ ಕ್ರಮದ ಬಗ್ಗೆಯೂ ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪವನ್ನು ಸಾಬೀತುಪಡಿಸಲು `ದೃಢವಾದ ಸಾಕ್ಷ್ಯ~ ನೀಡುವಂತೆ ಸಹ ಅವರನ್ನು ಕೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಗ್ಗೆ ತುಂಬ ತಡವಾಗಿ ದೂರು ನೀಡಲು ಏನು ಕಾರಣ ಎಂದು ಅವರನ್ನು ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ.

`ಸೇನಾ ಮುಖ್ಯಸ್ಥರ ಆರೋಪದ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಮುನ್ನ ಮತ್ತಷ್ಟು ಪುರಾವೆಗಳನ್ನು ಸಂಗ್ರಹಿಸಲು ಅದು ಪ್ರಾಥಮಿಕ ತನಿಖೆ ನಡೆಸುತ್ತಿದೆ.~ ಎಂದು ಮೂಲಗಳು ತಿಳಿಸಿವೆ.

`ಈ ಮೊದಲು ಸಿಂಗ್ ತಮ್ಮ ಆರೋಪವನ್ನು ಸಾಬೀತುಪಡಿಸಲು ದೃಢವಾದ ಸಾಕ್ಷ್ಯ ನೀಡಲು ಒಪ್ಪಿಕೊಂಡಿದ್ದರು. ಆದರೆ ತಮ್ಮನ್ನು ಪ್ರಶ್ನೆಗೊಳಪಡಿಸುವ ಮುನ್ನ ಅವರು ಹಾಗೆ ಮಾಡಿಲ್ಲ~ ಎಂದು ಅವು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.