ADVERTISEMENT

ಸೊಸೆ ಮೇಲೆ ಅತ್ಯಾಚಾರ: ಮಾವನಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಮುಜಾಫರ್‌ನಗರ (ಪಿಟಿಐ): ತನ್ನ ಸೊಸೆಯ ಮೇಲೆಯೇ ಅತ್ಯಾಚಾರ ಎಸಗಿದ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ 70 ವರ್ಷದ ಅಲಿ ಮಹಮ್ಮದ್ ಎಂಬಾತನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.

2005ರ ಜೂನ್ 13ರಂದು ಮಹಮ್ಮದ್ ಅವರನ್ನು ಬಂಧಿಸಲಾಗಿದ್ದು, ಎಂಟು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿರುವುದರಿಂದ ಅವರಿಗೆ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಸುರೇಂದ್ರ ಕುಮಾರ್ ತಿಳಿಸಿದರು. ಐವರು ಮಕ್ಕಳಿರುವ ಸೊಸೆಯ ಮೇಲಿನ ಅತ್ಯಾಚಾರ ಆರೋಪದಡಿ ಮಹಮ್ಮದ್ ಅವರಿಗೆ ಜಿಲ್ಲಾ ಸೆಷನ್ಸ್ ಕೋರ್ಟ್ 2006ರ ಅಕ್ಟೋಬರ್ 19ರಂದು ಹತ್ತು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮಹಮ್ಮದ್ ಹೈಕೋರ್ಟ್ ಮೊರೆ ಹೋಗಿದ್ದ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪಂಚಾಯತ್ ಈ ಸಂಬಂಧ ನಿರ್ಣಯವೊಂದನ್ನು ಜಾರಿಗೊಳಿಸಿ, ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಗಂಡ ನೂರ್ ಇಲಾಹಿಯನ್ನು ಮಗ ಎಂದು ಪರಿಗಣಿಸಬೇಕು ಹಾಗೂ ಆಕೆಯ ಮದುವೆ ಊರ್ಜಿತವಲ್ಲ ಎಂದು ಹೇಳಿತ್ತು.

ಆದರೆ ಪಂಚಾಯತ್‌ನ ಈ ತೀರ್ಮಾನ ದೇಶದಾದ್ಯಂತ ಬಿಸಿ ಚರ್ಚೆ, ಕೋಲಾಹಲಕ್ಕೆ ಕಾರಣವಾಗಿತ್ತು. ಇಲ್ಲಿಗೆ ಸಮೀಪದ ಕೂಕ್ರಾ ಗ್ರಾಮದಲ್ಲಿ ಈಗಲೂ ಪತ್ನಿಯೊಂದಿಗೆ ವಾಸವಾಗಿರುವ ಇಲಾಹಿ ತನ್ನ ತಂದೆಗೆ ಜಾಮೀನು ನೀಡಿರುವುದನ್ನು ಸ್ವಾಗತಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.