ADVERTISEMENT

ಸೋನಾವಾನೆ ಹತ್ಯೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2011, 19:30 IST
Last Updated 27 ಜನವರಿ 2011, 19:30 IST
ಸೋನಾವಾನೆ ಹತ್ಯೆ ಖಂಡಿಸಿ ಪ್ರತಿಭಟನೆ
ಸೋನಾವಾನೆ ಹತ್ಯೆ ಖಂಡಿಸಿ ಪ್ರತಿಭಟನೆ   

ಮುಂಬೈ (ಪಿಟಿಐ): ತೈಲ ಕಲಬೆರಕೆ ಮಾಫಿಯಾ ವಿರುದ್ಧ ಸಮರ ಸಾರಿದ್ದ ಮಾಲೇಗಾಂವ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆ ಅವರ ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದಾದ್ಯಂತ ಈ ಮಾಫಿಯಾ ವಿರುದ್ಧ ತೀವ್ರ ಸ್ವರೂಪದ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಗುರುವಾರ 180 ಜನರನ್ನು ಬಂಧಿಸಲಾಗಿದೆ.

ಮತ್ತೊಂದೆಡೆ ಸೋನಾವಾನೆ ಹತ್ಯೆ ಖಂಡಿಸಿ ರಾಜ್ಯದ 80 ಸಾವಿರಕ್ಕೂ ಅಧಿಕ ಗೆಜೆಟೆಡ್ ಅಧಿಕಾರಿಗಳು ಗುರುವಾರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದು, ಸರ್ಕಾರಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

‘ತೈಲ ಕಲಬೆರಕೆ ಮಾಫಿಯಾ ವಿರುದ್ಧ ರಾಜ್ಯದ 200ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 180 ಜನರನ್ನು ಬಂಧಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕೆ. ಪಿ. ರಘುವಂಶಿ ಗುರುವಾರ ಇಲ್ಲಿ ತಿಳಿಸಿದರು.

ಹನ್ನೊಂದು ಮಂದಿ ಬಂಧನ: ಸೋನಾವಾನೆ ಹತ್ಯೆಗೆ ಸಂಬಂಧಿಸಿದಂತೆ ಈಗಾಲೇ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಮುಖ್ಯ ಆರೋಪಿ ಪೊಪಟ್ ಶಿಂಧೆ ಇಲ್ಲಿನ ಜೆ.ಜೆ.ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಹೆಚ್ಚುವರಿ ಜಿಲ್ಲಾಧಿಕಾರಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವಾಗ ಆತನಿಗೂ ತೀವ್ರ ಸುಟ್ಟ ಗಾಯವಾಗಿತ್ತು.

ಕೆಲಸ ಸ್ಥಗಿತ: ಸೋನಾವಾನೆ ಬರ್ಬರ ಹತ್ಯೆ ಖಂಡಿಸಿ ರಾಜ್ಯದ 80 ಸಾವಿರಕ್ಕೂ ಅಧಿಕ ಗೆಜೆಟೆಡ್ ಅಧಿಕಾರಿಗಳು ಗುರುವಾರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಶಿವಸೇನೆ ಸಹ ಗುರುವಾರ ನಾಸಿಕ್ ಜಿಲ್ಲೆಯ ಮನ್ಮಾಡ್‌ನಲ್ಲಿ ಬಂದ್‌ಗೆ ಕರೆ ನೀಡಿತ್ತು.

‘ಈ ಕ್ರೂರ ಹತ್ಯೆಯಿಂದ ಸರ್ಕಾರಿ ಅಧಿಕಾರಿಗಳು ನಲುಗಿ ಹೋಗಿದ್ದಾರೆ. ಈ ಪ್ರತಿಭಟನೆಯನ್ನು ನಾವು ಮುಷ್ಕರ ಎಂದು ಕರೆಯುವುದಿಲ್ಲ, ಬದಲಿಗೆ ಕೆಲಸ ಸ್ಥಗಿತಗೊಳಿಸಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೇವೆ.

ಕೆಳ ಹಂತದ ಅಧಿಕಾರಿಗಳೂ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಹಾರಾಷ್ಟ್ರ ಗೆಜೆಟೆಡ್ ಅಧಿಕಾರಿಗಳ ಮಹಾಸಂಘದ ಅಧ್ಯಕ್ಷ ರವೀಂದ್ರ ಧೋಂಗಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.