ADVERTISEMENT

ಸೋನಿಯಾ, ರಾಹುಲ್‌ ಮೌನ ಪ್ರಶ್ನಿಸಿದ ಬಿಜೆಪಿ

ವಾದ್ರಾ– ಸಂಜಯ್‌ ಭಂಡಾರಿ ಸಂಬಂಧದ ಮಾಧ್ಯಮ ವರದಿ

ಪಿಟಿಐ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಸೋನಿಯಾ, ರಾಹುಲ್‌ ಮೌನ ಪ್ರಶ್ನಿಸಿದ ಬಿಜೆಪಿ
ಸೋನಿಯಾ, ರಾಹುಲ್‌ ಮೌನ ಪ್ರಶ್ನಿಸಿದ ಬಿಜೆಪಿ   

ನವದೆಹಲಿ: ರಾಬರ್ಟ್‌ ವಾದ್ರಾ ಮತ್ತು ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರ ಡೀಲರ್‌ ಸಂಜಯ್‌ ಭಂಡಾರಿ ನಡುವೆ ಸಂಬಂಧ ಇರುವ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯ ಬಗ್ಗೆ ಮೌನ ಮುರಿಯುವಂತೆ ಬಿಜೆಪಿಯು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಆಗ್ರಹಿಸಿದೆ.

ನವದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಸೋನಿಯಾ ಮತ್ತು ರಾಹುಲ್‌ ಅವರು ಮೌನವಾಗಿದ್ದರೆ ವಾದ್ರಾ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ನಿರ್ಮಲಾ, ಲಂಡನ್‌ನಲ್ಲಿ ವಾದ್ರಾಗೆ ಸೇರಿರುವ ಮನೆಯನ್ನು ಸಂಜಯ್‌ ಭಂಡಾರಿ ನವೀಕರಿಸಿದ್ದಾರೆ. ಅಲ್ಲದೇ ವಾದ್ರಾ ಅವರ ವಿದೇಶ ಪ್ರವಾಸಕ್ಕೆ ಭಂಡಾರಿ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಭಂಡಾರಿ ಅವರಿಗೆ ಸೇರಿದ ಬ್ಯಾಂಕ್‌ ಖಾತೆಗೆ 7.5 ಲಕ್ಷ ಸ್ವಿಸ್‌ ಫ್ರಾಂಕ್‌ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಹೇಳಿರುವ ನಿರ್ಮಾಲಾ, ಈ ಹಣ ಮತ್ತು ವಾದ್ರಾ ಅವರ ಲಂಡನ್‌ ನಿವಾಸ ನವೀಕರಣಕ್ಕೆ ಮಾಡಿರುವ ವೆಚ್ಚಕ್ಕೆ ಏನಾದರೂ ಸಂಬಂಧ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಇಬ್ಬರ ನಡುವೆ ಕನಿಷ್ಠ ಮೂರು ಬಾರಿ ಹಣದ ವ್ಯವಹಾರ ನಡೆದಿದ್ದು, ಇದರಲ್ಲಿ ಗಂಭೀರವಾದ ಆರ್ಥಿಕ ಪರಿಣಾಮಗಳಿವೆ ಎಂದು ಸಚಿವೆ ಹೇಳಿದ್ದಾರೆ.

‘ಸೋನಿಯಾ ಗಾಂಧಿ ಮತ್ತು ರಾಹುಲ್‌ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕತ್ವ ಈ ಬಗ್ಗೆ ಯಾಕೆ ಮೌನವಾಗಿದೆ’ ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ನಿರಂತರವಾಗಿ ಟ್ವೀಟ್‌ ಮಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ವಿಚಾರದಲ್ಲಿ ಅವರು ಮೌನವಾಗಿರುವುದಕ್ಕೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭಂಡಾರಿ ಅವರನ್ನು ಕರೆ ತರಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. 2012ರಲ್ಲಿ ಸಂಜರ್‌ ಭಂಡಾರಿ ಅವರು ವಾದ್ರಾ ಅವರಿಗಾಗಿ ವಿಮಾನದಲ್ಲಿ ಬಿಸಿನೆಸ್‌–ಕ್ಲಾಸ್‌ ಟಿಕೆಟ್‌ ಕಾಯ್ದಿರಿಸಿದ್ದರು ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿತ್ತು.

***
ಈ ವಿಚಾರದ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾವ್ಯಾತ್ಮಕವಾಗಿ ಪ್ರತಿಕ್ರಿಯೆ ನೀಡುವುದನ್ನು ಎದುರು ನೋಡುತ್ತಿದ್ದೇನೆ
ಸ್ಮೃತಿ ಇರಾನಿ ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.