ADVERTISEMENT

ಸೋರಿಕೆ ತಡೆಯಲು ಹೋಗಿ ಪರೀಕ್ಷೆ ತಡ

ಪಿಟಿಐ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST
ಸೋರಿಕೆ ತಡೆಯಲು ಹೋಗಿ ಪರೀಕ್ಷೆ ತಡ
ಸೋರಿಕೆ ತಡೆಯಲು ಹೋಗಿ ಪರೀಕ್ಷೆ ತಡ   

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜಾರಿಗೆ ತಂದ ಹೊಸ ವ್ಯವಸ್ಥೆಯ ಅನುಷ್ಠಾನದಲ್ಲಿ ಆದ ಗೊಂದಲದಿಂದಾಗಿ ರಾಜಧಾನಿ ದೆಹಲಿಯ ಹಲವು ಕೇಂದ್ರಗಳಲ್ಲಿ ಸೋಮವಾರ ನಡೆದ ಪರೀಕ್ಷೆಗಳು ಅರ್ಧ ತಾಸು ತಡವಾಗಿ ಆರಂಭವಾದವು.

ಅರ್ಥಶಾಸ್ತ್ರ ಮತ್ತು ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡ ಸಿಬಿಎಸ್‌ಇ ಸೋಮವಾರದಿಂದ ದೆಹಲಿ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ‘ಆನ್‌ಲೈನ್‌’ (ಯುಆರ್‌ಎಲ್‌ ಆಧರಿತ ವ್ಯವಸ್ಥೆ) ಮೂಲಕ ಪ್ರಶ್ನೆ ಪತ್ರಿಕೆ ರವಾನಿಸುವ ಹೊಸ ವಿಧಾನ ಜಾರಿಗೊಳಿಸಿದೆ.

ಆದರೆ, ಹೊಸ ವಿಧಾನದ ಸಮರ್ಪಕ ಅನುಷ್ಠಾನಕ್ಕೆ ಮೂಲ ಸೌಕರ್ಯ ಮತ್ತು ಮಾಹಿತಿ ಕೊರತೆಯಿಂದಾಗಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರದಾಡಬೇಕಾಯಿತು. ಇದರಿಂದಾಗಿ ಬಹುತೇಕ ಕೇಂದ್ರಗಳಿಗೆ ಹಳೆ ವಿಧಾನದಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ರವಾನಿಸಿ ಪರೀಕ್ಷೆ ನಡೆಸಲಾಗಿದೆ.

ADVERTISEMENT

ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಿಗದಿಗಿಂತ 15ರಿಂದ 30 ನಿಮಿಷದವರೆಗೆ ತಡವಾಗಿ ಪರೀಕ್ಷೆಗಳು ಆರಂಭವಾಗಿವೆ. ಪ್ರಶ್ನೆ ಪತ್ರಿಕೆ ವಿತರಣೆ ವಿಳಂಬವಾದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ 10ನೇ ತರಗತಿಯ ಸಂಸ್ಕೃತ, ಉರ್ದು, ಫ್ರೆಂಚ್‌ ಮತ್ತು 12ನೇ ತರಗತಿಯ ಹಿಂದಿ ಪರೀಕ್ಷೆ ನಡೆದವು. ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ನಡೆದ ಮೊದಲ ಪರೀಕ್ಷೆಗಳು ಇವಾಗಿವೆ.

ಮೊದಲೇ ಮಾಹಿತಿ ನೀಡಲಾಗಿತ್ತು: ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆ ರವಾನಿಸುವ ಬಗ್ಗೆ ಶನಿವಾರವೇ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೂ ಸುತ್ತೋಲೆ ಕಳುಹಿಸಲಾಗಿತ್ತು ಎಂದು ಸಿಬಿಎಸ್‌ಇ ಹೇಳಿದೆ.

ಭಾರಿ ವೇಗದ ಅಂತರ್ಜಾಲ ಸಂಪರ್ಕ, ಕಂಪ್ಯೂಟರ್‌, ಪ್ರಿಂಟರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು. ಎಲ್ಲ ಪ್ರಕ್ರಿಯೆ ಕಣ್ಗಾವಲಿನಲ್ಲಿಯೇ‌ ನಡೆಯಲು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಕೊಳ್ಳುವಂತೆಯೂ ತಾಕೀತು ಮಾಡಲಾಗಿತ್ತು ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆಗಳು ತಲುಪದ ಕಾರಣ ಮೊದಲೇ ಮುದ್ರಿತವಾಗಿದ್ದ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಯಿತು. ಇದರಿಂದ ಕೆಲವು ಶಾಲೆಗಳಲ್ಲಿ ಒಂದು ತಾಸು ವಿಳಂಬವಾಗಿ ಪರೀಕ್ಷೆ ಆರಂಭವಾಗಿವೆ ಎಂಬ ದೂರುಗಳು ಕೇಳಿ ಬಂದಿವೆ.

ನಕಲಿ ಪ್ರಶ್ನೆಪತ್ರಿಕೆ ನಂಬದಂತೆ ಮನವಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆಗಳು ನಕಲಿಯಾಗಿದ್ದು ಅವನ್ನು ಯಾರೂ ನಂಬದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನವಿ ಮಾಡಿದೆ.

ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗೆ ಕಿವಿಗೊಡದಂತೆ ಮತ್ತು ಈ ಬಗ್ಗೆ ಸಿಬಿಎಸ್‌ಇ ಗಮನಕ್ಕೆ ತರುವಂತೆ ಸಲಹೆ ಮಾಡಿದೆ. ಮಐಚ್ಛಿಕ ಹಿಂದಿ, ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವು ನಕಲಿ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ಹಳೆ ವಿಧಾನ
ಕರ್ನಾಟಕದಲ್ಲಿ ಸೋಮವಾರ ನಡೆದ ಪರೀಕ್ಷೆಗೆ ಹಳೆ ವಿಧಾನದಂತೆಯೇ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಹೊಸ ವಿಧಾನ ಅನುಷ್ಠಾನವಾಗಿಲ್ಲ. ಹೊಸ ವ್ಯವಸ್ಥೆ ಅಳವಡಿಕೆ ಕುರಿತು ಚರ್ಚೆಗಳು ನಡೆದಿವೆ.

ಪಂಜಾಬ್‌ನಲ್ಲಿ ಪರೀಕ್ಷೆ ಮುಂದೂಡಿಕೆ:ದಲಿತ ಸಂಘಟನೆಗಳ ಭಾರತ್‌ ಬಂದ್‌ ಕಾರಣ ಪಂಜಾಬ್‌ನಲ್ಲಿ ಸೋಮವಾರ ನಡೆಯಬೇಕಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಸೋಮವಾರ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡುವಂತೆ ಮಂಡಳಿಗೆ ಮನವಿ ಮಾಡಿತ್ತು. ಪಂಜಾಬ್‌ನಲ್ಲಿ ಮಾತ್ರ ಪರೀಕ್ಷೆ ಮುಂದೂಡಿದ ಮಂಡಳಿಯು ಶೀಘ್ರ ಹೊಸ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ಹೇಳಿದೆ.

ಅಧಿಕಾರಿಗಳ ಜತೆ ಸಂಪರ್ಕ ಇರಲಿಲ್ಲ
ಚಂಡೀಗಡ ಮತ್ತು ದೇಶದ ಇತರ ಕಡೆಗಳಲ್ಲಿ ಎಂದಿನಂತೆ ಪರೀಕ್ಷೆ ನಡೆದವು.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಧಿಕಾರಿಗಳ ಜತೆ ಸಂಪರ್ಕ ಇರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.

ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಲೆ ಬಂಧಿಸಲಾಗಿರುವ ಆರೋಪಿ ಶಿಕ್ಷಕರಾದ ರಿಷಬ್‌, ರೋಹಿತ್‌ ಮತ್ತು ತೌಕಿರ್‌ ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಕರ್ತವ್ಯ ಲೋಪದ ಮೇಲೆ ಅಮಾನತಾಗಿರುವ ಸಿಬಿಎಸ್‌ಇ ಅಧಿಕಾರಿ ರಾಣಾ ಈ ಪ್ರಕರಣದಲ್ಲಿ ಶಾಮೀಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ರಾಣಾ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದ್ದು, ಆ ಮಾಹಿತಿ ತರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.